ಶಿವಮೊಗ್ಗ : ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರನ್ನು ಇಂಗಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು. ಜಲಾಮೃತ ಹಾಗೂ ನೀರಿನ ಸಂರಕ್ಷಣೆ ಕುರಿತು ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಈ ಯೋಜನೆಯಡಿ ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳನ್ನು ಪ್ರಾಯೋಗಿಕ ಮಾದರಿ ಆಯ್ಕೆ ಮಾಡಲಾಗಿದೆ. ದೇಶಾದ್ಯಂತ ನವೆಂಬರ್ ತಿಂಗಳವರೆಗೆ ಯೋಜನೆ ಅನುಷ್ಠಾನಗೊಳ್ಳಲಿದೆ.
ಆದರೆ, ನಮ್ಮ ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳೊಳಗಾಗಿ ಮಳೆ ನೀರನ್ನು ಬಿದ್ದಲ್ಲಿಯೇ ಇಂಗಿಸಲು ಯೋಜನೆ ರೂಪಿಸಲಾಗಿದೆ. ತಕ್ಷಣದಿಂದ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಮಳೆಗಾಲಕ್ಕಿಂತ ಪೂರ್ವದಲ್ಲಿಯೇ ಪ್ರತಿ ಗ್ರಾಮಗಳಲ್ಲಿ ಕೆರೆಗಳ ರಿಪೇರಿ, ಪ್ರತಿ ದೇವಸ್ಥಾನದ ಕಲ್ಯಾಣಿಗಳ ಸ್ವಚ್ಛತಾ ಕಾರ್ಯ, ಬೋರ್‌ವೆಲ್ ರಿಚಾರ್ಜ್ ಮೊದಲಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಗುರುತಿಸಿ ಅನುಷ್ಠಾನಗೊಳಿಸಬೇಕು. ನೆಲಕ್ಕೆ ಬಿದ್ದ ನೀರು ಸುಮ್ಮನೆ ಹರಿದು ಹೋಗಲು ಬಿಡದೆ ಆದಷ್ಟು ನೆಲದಲ್ಲಿ ಇಂಗಿಸುವುದು ಈ ಯೋಜನೆಯ ಗುರಿಯಾಗಿದೆ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯ ದಾಖಲೆ ಪ್ರಮಾಣದಲ್ಲಿ ಕಳೆದ ಸಾಲಿನಲ್ಲಿ ಉದ್ಯೋಗ ಕಲ್ಪಿಸಿದೆ. ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಠಿ ಗುರಿ ನಿಗದಿಪಡಿಸಿತ್ತು.
ಆದರೆ, ನಮ್ಮ ರಾಜ್ಯ ಮಾರ್ಚ್ ಅಂತ್ಯದ ವೇಳೆಗೆ 15 ಕೋಟಿ ಮಾನವ ದಿನಗಳನ್ನು ಸೃಜಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 42 ಲಕ್ಷ ಮಾನವ ದಿನಗಳನ್ನು ಸೃಷ್ಠಿಸಿದ್ದು ದಾಖಲೆಯಾಗಿದ್ದು, ಇದುವರೆಗೆ ಗರಿಷ್ಠ ಅಂದರೆ 28 ಲಕ್ಷ ಮಾನವ ದಿನಗಳನ್ನು ಜಿಲ್ಲೆಯಲ್ಲಿ ಸೃಷ್ಠಿಸಲಾಗಿತ್ತು ಎಂದು ಹೇಳಿದರು.
ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ಅಂತರ್ಜಲ ಸಂರಕ್ಷಣೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇರುವ ನೀರನ್ನು ಸದ್ಬಳಕೆ ಮಾಡಿ ಮುಂದಿನ ತಲೆಮಾರಿಗೆ ನೀರಿನ ಮೂಲಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಎಲ್ ವೈಶಾಲಿ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಯೋಜನೆಯ ಹಿರಿಯ ಅಧಿಕಾರಿ ಅಮರ್ ಸಕ್ಸೇನಾ ಮೊದಲಾದವರು ಉಪಸ್ಥಿತರಿದ್ದರು.