ಶಿವಮೊಗ್ಗ: ತಾಲೂಕಿನ ಹಾರನಹಳ್ಳಿ ಗ್ರಾಮಸ್ಥರು ಮತ್ತು ದಾವಣಗೆರೆ ಜಿಲ್ಲೆಯ ಬೇಲಿ ಮಲ್ಲೂರು ಗ್ರಾಮದವರು ಕಾಣೆಯಾದ ಒಂದು ಕೋಣಕ್ಕಾಗಿ ಹುಡುಕಾಟ ನಡೆಸಿದ್ದು, ಇದೀಗ ಕೋಣ ಪತ್ತೆಯಾಗಿದೆ. ಪತ್ತೆಯಾದ ಕೋಣವನ್ನು ನಮ್ಮದು ಎಂದು ಈ ಎರಡು ಗ್ರಾಮಗಳ ಜನರು ಕಿತ್ತಾಟ ನಡೆಸುತ್ತಿದ್ದಾರೆ.
ತಾಲೂಕಿನ ಹಾರನಹಳ್ಳಿ ಗ್ರಾಮದ ಮಾರಿಕಾಂಬ ದೇವರಿಗೆ ಐದು ವರ್ಷಗಳ ಹಿಂದೆ ಕೋಣವನ್ನು ಬಿಟ್ಟಿದ್ದರು. ಆದರೆ ಈ ಕೋಣ ಎರಡೂವರೆ ವರ್ಷದ ಹಿಂದೆ ಕಾಣೆಯಾಗಿತ್ತು. ಈ ವರ್ಷದ ಡಿಸೆಂಬರ್ನಲ್ಲಿ ಮಾರಿ ಜಾತ್ರೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಹಾರನಹಳ್ಳಿ ಗ್ರಾಮಸ್ಥರು ಕಳೆದ ಆರು ತಿಂಗಳಿನಿಂದ ಕೋಣನಿಗೆ ಶೋಧ ಪ್ರಾರಂಭಿಸಿದ್ದರು. ಇತ್ತ ಹಾರನಹಳ್ಳಿ ಗ್ರಾಮಸ್ಥರು ಕೋಣ ಹುಡುಕುತ್ತಿದ್ದರೆ, ಅತ್ತ ಬೇಲಿ ಮಲ್ಲೂರು ಗ್ರಾಮಸ್ಥರು ತಮ್ಮೂರಿನ ಕೋಣ ಕಾಣೆಯಾಗಿದೆ ಎಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಹೊನ್ನಾಳಿಯಲ್ಲೊಂದು ಕೋಣ ಪತ್ತೆಯಾಗಿದ್ದು, ತಕ್ಷಣ ಅಲ್ಲಿಗೆ ತೆರಳಿದ ಹಾರನಹಳ್ಳಿ ಗ್ರಾಮಸ್ಥರು ಕೋಣನ ಚಹರೆ ಹಾಗೂ ಮೈಮೇಲಿನ ಗುರುತು ನೋಡಿ ಕೋಣ ನಮ್ಮದೆಂದು ಹಾರನಹಳ್ಳಿಗೆ ತಂದಿದ್ದಾರೆ. ಅತ್ತ ಬೇಲಿ ಮಲ್ಲೂರಿನ ಗ್ರಾಮಸ್ಥರು ಈ ಕೋಣ ನಮ್ಮದೆಂದು ಮತ್ತೆ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ. ಇದೇ ವೇಳೆ ಹಾರನಹಳ್ಳಿ ಗ್ರಾಮಸ್ಥರು ದೇವರ ಕೋಣ ನಮ್ಮದು ಎಂದು ಗ್ರಾಮಕ್ಕೆ ತಂದು ಮೆರವಣಿಗೆ ನಡೆಸಿದ್ದಾರೆ.
ಇದೀಗ ಸದ್ಯ ಕೋಣ ಯಾರದು ಎಂದು ಇನ್ನೂ ತೀರ್ಮಾನವಾಗಿಲ್ಲ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎರಡು ಗ್ರಾಮಸ್ಥರನ್ನು ಕರೆಯಿಸಿ ಪೊಲೀಸರು ಮಾತುಕತೆ ನಡೆಸಲಿದ್ದಾರೆ.