ಶಿವಮೊಗ್ಗ: ರಾಜ್ಯಾದ್ಯಂತ ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜ್.ವಿ.ಕಾಗಲ್ಕರ್ ತಿಳಿಸಿದರು.
ಜಿಲ್ಲೆಯ 33 ಪರೀಕ್ಷಾ ಕೇಂದ್ರಗಳಲ್ಲಿ 11,128 ವಿದ್ಯಾರ್ಥಿನಿಯರು, 8,620 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸರ್ಕಾರಿ ಕಾಲೇಜಿನ 10,911 ವಿದ್ಯಾರ್ಥಿಗಳು, ಅನುದಾನಿತ ಕಾಲೇಜಿನ 2,905 ವಿದ್ಯಾರ್ಥಿಗಳು, ಅನುದಾನ ರಹಿತ ಕಾಲೇಜುಗಳ 5,758 ವಿದ್ಯಾರ್ಥಿಗಳಿದ್ದಾರೆ. ಅಷ್ಟೇ ಅಲ್ಲದೆ, ಹೊಸದಾಗಿ ಪರೀಕ್ಷೆ ಬರೆಯುತ್ತಿರುವ 16,940 ವಿದ್ಯಾರ್ಥಿಗಳು, ಪುನರಾವರ್ತಿತ 1744 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪರೀಕ್ಷಾ ಮೇಲ್ವಿಚಾರಕರು ಮೊಬೈಲ್ ಬಳಸುವಂತಿಲ್ಲ. ಎಲ್ಲಾ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.