ಶಿವಮೊಗ್ಗ: ಏಳನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಬೇಕೆಂಬ ನಿರ್ಣಯವನ್ನ ಸರ್ಕಾರ ಶಾಶ್ವತವಾಗಿ ಕೈಬಿಡಬೇಕೆಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ(ಎಸ್ಐಒ)ಸಂಘಟನೆ ಆಗ್ರಹಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸ್ಥೆಯ ರಾಜ್ಯಾಧ್ಯಕ್ಷ ನಿಹಾದ್ ಹಿರಿಯೂರು, ಸರ್ಕಾರ ತರಾತುರಿಯಲ್ಲಿ ಏಳನೇ ತರಗತಿ ಪಬ್ಲಿಕ್ ಪರೀಕ್ಷೆ ಹೇರಲು ಹೊರಟಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಅವೈಜ್ಞಾನಿಕ ತೀರ್ಮಾನವನ್ನು ನಾವು ಖಂಡಿಸುತ್ತೇವೆ. ಸಚಿವರು ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಪಬ್ಲಿಕ್ ಪರೀಕ್ಷೆ ಜಾರಿಗೊಳಿಸಲಾಗುತ್ತದೆ ಎನ್ನುತ್ತಿದ್ದಾರೆ. ಆದರೆ, ಈ ಕ್ರಮ ಸರಿಯಲ್ಲ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಶಿಕ್ಷಕರೇ ಕೊರತೆಯಿಂದ ಪಾಠ ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ. ಕೆಲವು ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆಗಳಿದ್ದು, ಈ ಸಮಸ್ಯೆಗಳನ್ನು ಪರಿಹರಿಸದೇ ಪಬ್ಲಿಕ್ ಪರೀಕ್ಷೆ ಹೇಳಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದರು.
ಮುಂದಿನ ವರ್ಷದಿಂದ ಈ ಕ್ರಮವನ್ನು ಜಾರಿಗೊಳಿಸುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಇದರಿಂದ ಶೇ.50ರಷ್ಟು ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಶಾಲೆಯಿಂದ ವಂಚಿತರಾಗುತ್ತಾರೆ. ಸರ್ಕಾರ ಮೊದಲು ಶಿಕ್ಷಕರ ಗುಣಮಟ್ಟ ಬೋಧನೆ ಸರಿಪಡಿಸಬೇಕು. ಶಿಕ್ಷಕರ ನೇಮಕಾತಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ನೀಡಬೇಕು. ಆ ನಂತರ ಪಬ್ಲಿಕ್ ಪರೀಕ್ಷೆ ಬಗ್ಗೆ ಯೋಚಿಸಬೇಕು ಎಂದು ಆಗ್ರಹಿಸಿದರು.
ಭಾರತ ಸರ್ಕಾರ ಹೊಸ ಶಿಕ್ಷಣ ಪದ್ಧತಿ ರೂಪಿಸಲು ಹೊರಟಿದೆ. ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವ ಮುನ್ನ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಬೇರೆ ಬೇರೆ ರಾಜ್ಯಗಳು ಬರುತ್ತದೆ. ಭಾಷೆ, ಇತಿಹಾಸ ,ಭೌಗೋಳಿಕ ವಿಷಯಗಳು ಅಲ್ಲಿನ ಆರ್ಥಿಕ ಪರಿಸ್ಥಿತಿ ಎಲ್ಲವೂ ಭಿನ್ನವಾಗಿರುತ್ತವೆ. ಹಾಗಾಗಿ ಏಕ ರೂಪ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವ ಮೊದಲು ಈ ಕುರಿತು ಮತ್ತೊಮ್ಮೆ ಚರ್ಚೆಯಾಗಬೇಕು ಎಂದರು.