ಶಿವಮೊಗ್ಗ: ಕಲಿಯುಗದಲ್ಲಿ ಸಿಕ್ಕಿದ್ದೇ ಸಿರುಂಡೆ ಅನ್ನುವವರೆ ಹೆಚ್ಚು. ಆದರೆ ತಮಗೆ ಸಿಕ್ಕ ಲಕ್ಷಾಂತರ ರೂ,ಬೆಲೆಯ ಚಿನ್ನಾಭರಣವನ್ನು ಪೊಲೀಸರು ಮಾಲೀಕರಿಗೆ ವಾಪಸ್ ನೀಡಿ ಭೇಷ್ ಎನಿಸಿಕೊಂಡಿದ್ದಾರೆ.
ಕಳೆದ 2 ದಿನಗಳ ಹಿಂದೆ ಶಿವಮೊಗ್ಗ ತಾಲೂಕು ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿ ಚೋರಡಿ ಬಳಿ ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿತ್ತು. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಕಡೂರಿನ ನಿವಾಸಿಯಾದ ವಿದ್ಯುತ್ ಇಲಾಖೆಯ ಸುಬ್ಬಯ್ಯ ಹಾಗೂ ಅವರ ಪತ್ನಿ ಭಾರತಿ ತಮ್ಮ ಸಂಬಂಧಿಕರ ಮನೆಯಿಂದ ಕಡೂರಿಗೆ ವಾಪಸ್ ಆಗುವಾಗ ಅಪಘಾತವಾಗಿತ್ತು.
ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕುಂಸಿ ಠಾಣೆಯ ಪಿಎಸ್ಐ ನವೀನ್ ಮಠಪತಿ ರವರಿಗೆ ಕಾರಿನಲ್ಲಿ ಒಂದು ಬ್ಯಾಗ್ ಸಿಕ್ಕಿತ್ತು. ಅದನ್ನು ಠಾಣೆಯಲ್ಲಿಟ್ಟು, ಗಾಯಾಳು ಆಸ್ಪತ್ರೆಗೆ ದಾಖಲಿಸಿ ತನಿಖೆ ನಡೆಸುತ್ತಿದ್ದರು.
ಬಳಿಕ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ಕಂಡಿದೆ. ಇಂದು ಸುಬ್ಬಯ್ಯನವರನ್ನು ಪೊಲೀಸ್ ಠಾಣೆಗೆ ಕರೆಯಿಸಿ ಚಿನ್ನಾಭರಣವನ್ನು ವಾಪಸ್ ನೀಡಿದ್ದಾರೆ.