ಶಿವಮೊಗ್ಗ: ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ. ವಿಶ್ವಶ್ವೇರಯ್ಯನವರ ಆಸಕ್ತಿಯಿಂದ ಸ್ಥಾಪಿತವಾದ ಮೈಸೂರು ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ನಂತರ ಸರ್.ಎಂ.ವಿಶ್ವಶ್ವೇರಯ್ಯ ಕಾರ್ಖಾನೆಯಾಗಿ ಮರು ನಾಮಕರಣವಾಯಿತು. ಇಂತಹ ಐತಿಹಾಸಿಕ ಕಾರ್ಖಾನೆಯನ್ನು ನಷ್ಟದ ಹಾದಿಯಲ್ಲಿದೆ. ಕಾರ್ಖಾನೆ ಜೊತೆ ತಮ್ಮನ್ನು ಉಳಿಸಿ ಎಂದು ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ಮಾಡುತ್ತಿದ್ದಾರೆ.
ಕಾರ್ಖಾನೆಯ ಇತಿಹಾಸ: ವಿಐಎಸ್ಎಲ್ ಕಾರ್ಖಾನೆಯನ್ನು ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆಮ್ಮಣ್ಣು ಗುಂಡಿಯಲ್ಲಿ ಸಿಗುವ ಕಬ್ಬಿಣದ ಅದಿರು ತೆಗೆದು ಕಬ್ಬಿಣ ತಯಾರು ಮಾಡಿ, ಇಲ್ಲಿನ ಜನರಿಗೆ ಉದ್ಯೋಗ ನೀಡುವ ಮಹತ್ವಾಕಾಂಕ್ಷೆಯಿಂದ ಸ್ಥಾಪಿಸಿದರು. ಇದಕ್ಕೆ ಪೂರಕವಾಗಿ ಸರ್.ಎಂ. ವಿಶ್ವಶ್ವೇರಯ್ಯನವರು ಸಹ ಯೋಜನೆ ಹಾಕಿಕೊಟ್ಟರು. 1917 ರಲ್ಲಿ ಕಾರ್ಖಾನೆ ರೂಪಗೊಂಡಿತ್ತು. ಆದರೆ 1923 ರಲ್ಲಿ ಕಬ್ಬಿಣ ತಯಾರು ಮಾಡಲು ಪ್ರಾರಂಭವಾಯಿತು.
ನಂತರದ ದಿನಗಳಲ್ಲಿ ಪರಿಸರ ಪ್ರೇಮಿಗಳ ಹೋರಾಟದ ಫಲವಾಗಿ ಕೆಮ್ಮಣ್ಣುಗುಂಡಿಯಲ್ಲಿ ಅದಿರು ತೆಗೆಯುವುದನ್ನು ನಿಲ್ಲಿಸಲಾಯಿತು. ನಂತರದ ದಿನಗಳಲ್ಲಿ ಕಾರ್ಖಾನೆ ಸಂಕಷ್ಟ ಪ್ರಾರಂಭವಾಯಿತು ಎಂದರೆ ತಪ್ಪಾಗಲಾರದು. ಇದರಂತೆ ಭದ್ರಾವತಿಯ ವಿಐಎಸ್ಎಲ್ನ ಕಾರ್ಖಾನೆಯನ್ನು ಮುಚ್ಚಬೇಡಿ ಎಂದು ಒತ್ತಾಯಿಸಿ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂದೆ ಧರಣಿ ಪ್ರಾರಂಭಿಸಿದ್ದಾರೆ.
1 ರೂ ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಕಾರ್ಖಾನೆ ಹಸ್ತಾಂತರ: ಕಬ್ಬಿಣದ ಅದಿರು ಇಲ್ಲದ ಕಾರಣ ಕಾರ್ಖಾನೆ ಕುಂಟುತ್ತಾ ಸಾಗಿತು. ಈ ವೇಳೆ ಕೇಂದ್ರದ ಕಬ್ಬಿಣ, ಉಕ್ಕು ಪ್ರಾಧಿಕಾರಕ್ಕೆ ಕಾರ್ಖಾನೆ ಹಸ್ತಾಂತರ ಮಾಡಿದರೆ, ಕಾರ್ಖಾನೆ ಉಳಿಯುತ್ತದೆ ಎಂದು ರಾಜ್ಯ ಸರ್ಕಾರ ಕೇವಲ ಒಂದು ರೂಗೆ ಕೇಂದ್ರ ಸರ್ಕಾರಕ್ಕೆ 1989 ರಲ್ಲಿ ನೀಡಿತು. ರಾಜ್ಯ ಸರ್ಕಾರ ಕೋಟ್ಯಾಂತರ ರೂ ಕಾರ್ಖಾನೆಗಾಗಿ ಬಂಡವಾಳ ನೀಡಲು ಆಗದ ಕಾರಣ, ಕೇಂದ್ರದ ಉಕ್ಕು ಪ್ರಾಧಿಕಾರಕ್ಕೆ ನೀಡಿತು. ಅವರ ಹತ್ತಾರು ಕಾರ್ಖಾನೆಯಡಿ ಇದು ನಡೆಯುತ್ತದೆ. ಇಲ್ಲಿನ ಕಾರ್ಖಾನೆ ಕಾರ್ಮಿಕರು, ಅವಲಂಬಿತರು ಬದುಕುತ್ತಾರೆ ಎಂದು ಸೈಲ್ಗೆ ಕಾರ್ಖಾನೆಯನ್ನು ನೀಡಲಾಯಿತು. ಅಂದರೆ, ಕಾರ್ಖಾನೆ ಬೆಳವಣಿಗೆಗೆ ಸಹಕಾರಿಯಾಗಿ ಬಂಡವಾಳವನ್ನು ಹಾಕಬೇಕು ಎಂದು ನೀಡಲಾಯಿತು. ನಂತರ 1998 ರಲ್ಲಿ ಸಂಪೂರ್ಣವಾಗಿ ಕಾರ್ಖಾನೆಯನ್ನು SAIL ಗೆ ನೀಡಲಾಯಿತು.
ಸಾವಿರಾರು ಕಾರ್ಮಿಕರನ್ನು ಹೊಂದಿದ್ದ ಕಾರ್ಖಾನೆ ಈಗ ಕೇವಲ 250 ಖಾಯಂ ಕಾರ್ಮಿಕರನ್ನು ಹೊಂದಿದೆ. 1500 ಗುತ್ತಿಗೆ ಕಾರ್ಮಿಕರನ್ನು ಹೊಂದಿದೆ. ಕಳೆದ 20 ವರ್ಷಗಳಿಂದ ಕಾರ್ಖಾನೆಯನ್ನು ಖಾಸಗಿಕರಣ ಮಾಡಲು ಸೈಲ್ ಯತ್ನ ಮಾಡುತ್ತಿದೆ. ಕಾರ್ಖಾನೆ ನಷ್ಟದಲ್ಲಿ ನಡೆಯುತ್ತಿದೆ ಎಂದು ನೀತಿ ಆಯೋಗ ನಿರ್ಧಾರ ಎಂದು ತಿಳಿಸಿ, ವಿಐಎಸ್ ಎಲ್ ಒಂದು ನಷ್ಟದ ಉದ್ಯಮ ಎಂದು ಘೋಷಿಸಿ ಖಾಸಗಿಕರಣಕ್ಕೆ ಯತ್ನ ಮಾಡಲಾಯಿತು. ಆದರೆ ಕಾರ್ಖಾನೆಯನ್ನು ಯಾರು ಖರೀದಿಗೆ ಮುಂದೆ ಬಂದಿಲ್ಲ.
ಕಾರ್ಖಾನೆ ಮುಚ್ಚಿದರೆ ಗುತ್ತಿಗೆ ಕಾರ್ಮಿಕರು ಬೀದಿ ಪಾಲು: ವಿಐಎಸ್ಎಲ್ ಕಾರ್ಖಾನೆ ಮುಚ್ಚಿದರೆ 1500 ಜನ ಬೀದಿ ಪಾಲಾಗುವುದು ಖಚಿತ. ಒಂದು ವೇಳೆ ಕಾರ್ಖಾನೆ ಮುಚ್ಚಿದರೆ ಖಾಯಂ ನೌಕರರನ್ನು ಈ ಕಾರ್ಖಾನೆ ಇಲ್ಲವಾದ್ರೆ, ಸೈಲ್ನ ಬೇರೆ ಕಾರ್ಖಾನೆಗೆ ವರ್ಗಾವಣೆಯಾಗಬಹುದು. ಅವರಿಗೆ ಉದ್ಯೋಗದ ಸಮಸ್ಯೆ ಎದುರಾಗುವುದಿಲ್ಲ. ಆದರೆ ನಮ್ಮ ಗತಿ ಏನೂ.? ಕಾರ್ಖಾನೆಗೆ ಬಂಡವಾಳವನ್ನು ಹಾಕದೆ ನಷ್ಟ ಅಂದರೆ ಹೇಗೆ.? ಎಂಪಿಎಂ ಕಾರ್ಖಾನೆ ಮುಚ್ಚಿದರೆ ಭದ್ರಾವತಿ ಅರ್ಧ ಹಾಳಾಗಿ ಹೋಗಲಿದೆ ಎಂಬುದು ಕಾರ್ಮಿಕರ ಗೋಳಾಗಿದೆ.
ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರು ಕಾರ್ಖಾನೆಗೆ ಬಂಡವಾಳ ತೂಡಗಿಸುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿ ಈಗ ಕೈಚಲ್ಲಿ ಕುಳಿತುಕೊಂಡಿದ್ದಾರೆ. ಇದರಿಂದ ನಮಗೆ ದಾರಿ ಕಾಣದಂತೆ ಆಗಿದೆ. ನಾವು ಕಳೆದ 25 ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡಿದ್ದೇವೆ. ನಮಗೆ ಈಗ 45-50 ವರ್ಷವಾಗಿದೆ. ಈ ಸಂದರ್ಭದಲ್ಲಿ ನಮಗೆ ಬೇರೆ ಕರೆ ಹೋಗಿ ಕೆಲಸ ಮಾಡಲು ಯಾರು ಕರೆಯುವುದಿಲ್ಲ. ಇಷ್ಟೊಂದು ಜನರಿಗೆ ಬೇರೆ ಉದ್ಯೋಗ ಒದಗಿಸುವ ದೊಡ್ಡ ಕೈಗಾರಿಕೆ ನಮ್ಮಲ್ಲಿ ಇಲ್ಲ. ಇದರಿಂದ ಭದ್ರಾವತಿ ಜನತೆಯ ಸಹಕಾರ ಪಡೆದು ಕಾರ್ಖಾನೆ ಉಳಿಸಿ ಎಂದು ಹೋರಾಟ ನಡೆಸಲಾಗುವುದು ವಿಐಎಸ್ಎಲ್ ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಸೈಲ್ನ ಮಲತಾಯಿ ಧೋರಣೆ: ವಿಐಎಸ್ ಎಲ್ ಕಾರ್ಖಾನೆಯನ್ನು ಬಂಡವಾಳ ಹಾಕಿ ಅಭಿವೃದ್ಧಿ ಪಡಿಸಿದ್ದರೆ, ಇಷ್ಟೊಂದು ಜನ ಓಡಾಡುತ್ತಿದ್ದಾರೆ. ಸೈಲ್ ವಿಐಎಸ್ಎಲ್ಗೆ ಸರಿಯಾದ ಬಂಡವಾಳ ಹಾಕದೆ ನಿರಂತರ ನಷ್ಟ ಎಂದು ಹೇಳಿಕೊಂಡು ಬಂದಿದೆ. ಅದೇ ಸೈಲ್ನ ಇತರೆ ಕಾರ್ಖಾನೆಗಳು ಚೆನ್ನಾಗಿಯೇ ನಡೆಯುತ್ತಿವೆ. ಸೈಲ್ ಇತರೆ ಕಾರ್ಖಾನೆಗಳಲ್ಲಿ ಕೋಟಿ ಕೋಟಿ ರೂ ಬಂಡವಾಳ ಹಾಕಿದೆ. ಆದರೆ ಇಲ್ಲಿಗೆ ಬಂಡವಾಳವನ್ನೇ ಹಾಕಿಲ್ಲ. ಇದರಿಂದ ನಷ್ಟ ಎಂದು ತೋರಿಸುತ್ತಿದೆ. ದೇಶದ ಅತ್ಯುತ್ತಮ ಕಾರ್ಖಾನೆಯಾದ ವಿಐಎಸ್ಎಲ್ ಅನ್ನು ನಷ್ಟ ಎಂದು ಮುಚ್ಚದೆ, ರಾಜ್ಯದ ಎಲ್ಲಾ ಸಂಸದರು ಪ್ರಧಾನಿ ಮೋದಿ ಅವರ ಬಳಿ ಮನವರಿಕೆ ಮಾಡಿಕೊಡಬೇಕಿದೆ ಎಂದು ಗುತ್ತಿಗೆ ಕಾರ್ಮಿಕ ತ್ಯಾಗರಾಜ್ ಒತ್ತಾಯಿಸಿದರು.
ಇದನ್ನೂ ಓದಿ: ಅನುಕಂಪದ ಆಧಾರದಲ್ಲಿ ಉದ್ಯೋಗಾವಕಾಶ ಪಡೆಯುವುದು ಹಕ್ಕಲ್ಲ: ಹೈಕೋರ್ಟ್