ಶಿವಮೊಗ್ಗ: ನಗರದ ಗುಡ್ಡೇಕಲ್ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ಮತ್ತು ಗುಡ್ಡೇಕಲ್ ಸ್ಮಶಾನ ಹಿತರಕ್ಷಣಾ ಸಮಿತಿ ನಡುವಿನ ವಿವಾದ ತಾರಕಕ್ಕೇರಿದ್ದು, ಸ್ಮಶಾನ ಜಾಗವನ್ನು ಅತಿಕ್ರಮಣ ಮಾಡಿ ದೇವಸ್ಥಾನ ಸಮಿತಿಯವರು ಅನಧಿಕೃತವಾಗಿ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದಾರೆ. ಕೂಡಲೇ ಸ್ಮಶಾನ ಜಾಗದ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಸ್ಮಶಾನ ರಕ್ಷಣಾ ಸಮಿತಿ ಮಹಾನಗರ ಪಾಲಿಕೆಗೆ ಎದುರು ಪ್ರತಿಭಟಿಸುವ ಮೂಲಕ ಮನವಿ ಸಲ್ಲಿಸಿದೆ.
2017 ಜೂನ್ 10, 13ರಂದು ಗುರುಪುರ ನಿವಾಸಿಗಳು ಮತ್ತು ಗುಡ್ಡೇಕಲ್ ಸ್ಮಶಾನ ಹಿತರಕ್ಷಣಾ ಸಮಿತಿಯವರು ಸ್ಮಶಾನ ಜಾಗದ ಅತಿಕ್ರಮಣವನ್ನು ತೆರವುಗೊಳಿಸಿ ಗುಡ್ಡೇಕಲ್ ದೇವಸ್ಥಾನ ಟ್ರಸ್ಟ್ಗೆ ಸೇರಿದ ಜಾಗವನ್ನು ಸರ್ವೆ ಮಾಡಿಸಿ ಪೋಡಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯದಿಂದಲೇ ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಲಾಗಿತ್ತು.
ಆದರೂ ಕೂಡ ದೇವಸ್ಥಾನ ಸಮಿತಿಯವರು ಈಗಾಗಲೇ ಎರಡು ಕಲ್ಯಾಣ ಮಂದಿರ ಇದ್ದರೂ ಸ್ಮಶಾನಕ್ಕೆ ಸೇರಿದ ಜಾಗದಲ್ಲಿ ಅತ್ಯಂತ ಹಳೆಯ ಸ್ಮಶಾನ ಕಟ್ಟೆಯನ್ನು ಕೆಡವಿದ್ದಾರೆ. ಈಗಾಗಲೇ ಸಮುದಾಯ ಭವನಕ್ಕೆ ಕಾಂಕ್ರೀಟ್ ಕಲರ್ಗಳನ್ನು ಹಾಕಿ ನಿರ್ಮಾಣ ಕೆಲಸ ಆರಂಭಿಸಿದೆ. ಈ ಬಗ್ಗೆ ಸ್ಮಶಾನ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ತಾವೇ ಜೆಸಿಬಿ ಸಹಾಯದಿಂದ ಪಿಲ್ಲರ್ಗಳನ್ನು ಕೆಡವಿ ಸ್ಮಶಾನ ಸಮಿತಿ ಮೇಲೆ ಪಿಲ್ಲರ್ ಕೆಡವಿದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಲಾಗಿದೆ ಎನ್ನಲಾಗಿದೆ.