ಹುಬ್ಬಳ್ಳಿ/ಶಿವಮೊಗ್ಗ: ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿ ಮಾಜಿ ಶಾಸಕ ಎನ್.ಹೆಚ್ ಕೋನರೆಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ನಗರದ ಚೆನ್ನಮ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ನಾಶ ಮಾಡಲು ಹೊರಟಿದೆ. ಯಾವುದೇ ಕಾಯ್ದೆ ಜಾರಿಗೆ ತರಬೇಕಾದರೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಇರಬೇಕು. ಗೋಹತ್ಯೆ ಕಾಯ್ದೆಯಿಂದ ಯಾರಿಗೆ ಲಾಭವಿದೆ, ಹಸುಗಳು ಮೇವು ಇಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಕೇಂದ್ರ ಸರ್ಕಾರ ತನ್ನ ನಿಲುವು ಬದಲಿಸಿ, ಕೂಡಲೇ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕೃಷಿ ಕಾಯ್ದೆ ಪ್ರತಿ ಸುಟ್ಟು ಶಿವಮೊಗ್ಗದಲ್ಲಿ ಪ್ರತಿಭಟನೆ
ಭಾರತ್ ಬಂದ್ ಬೆಂಬಲಿಸಿ ಶಿವಮೊಗ್ಗ ನಗರದಲ್ಲಿ ಕೃಷಿ ಕಾಯ್ದೆಗಳ ಪ್ರತಿ ಸುಟ್ಟು ರೈತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟಿಸಿದ ರೈತರು, ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಸುಗ್ರಿವಾಜ್ಞೆ ಮೂಲಕ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದು ದೂರಿದರು.
ಇದನ್ನೂ ಓದಿ: ಬಳ್ಳಾರಿಯಲ್ಲಿ ಭಾರತ್ ಬಂದ್ಗೆ ಮಿಶ್ರ ಪ್ರತಿಕ್ರಿಯೆ.. ಹೊಸಪೇಟೆಯಲ್ಲಿ ಜನಜೀವನ ಎಂದಿನಂತೆ
ರೈತ ಮುಖಂಡರಾದ ಹೆಚ್.ಆರ್ ಬಸವರಾಜಪ್ಪ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಶ್ರೀಕಾಂತ್, ಎನ್. ರಮೇಶ್, ಯೋಗೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.