ಶಿವಮೊಗ್ಗ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಇಂದು ದೇಶಾದ್ಯಂತ ಮುಷ್ಕರ ನಡೆಯುತ್ತಿದ್ದು, ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಕೇಂದ್ರವು ಕಾರ್ಮಿಕರ ವಿರುದ್ಧ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಸರ್ಕಾರಿ ವಲಯಗಳನ್ನು ಖಾಸಗೀಕರಣ ಮಾಡಲು ಕೇಂದ್ರವು ಹೊರಟಿದ್ದು, ಕಾರ್ಮಿಕರನ್ನು ಬೀದಿ ಪಾಲು ಮಾಡಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು), ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್, ಎಐಟಿಯುಸಿ, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘಟನೆ, ಅಂಚೆ ಇಲಾಖೆ ನೌಕರರ ಸಂಘ, ಎಲ್ಐಸಿ ನೌಕರರ ಸಂಘ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರದ ನೀತಿಯಿಂದ ನಿವೃತ್ತಿ ಬಳಿಕ ಪಿಂಚಣಿ ಇಲ್ಲದೇ ನೌಕರರ ನಿವೃತ್ತಿ ಜೀವನ ಅತಂತ್ರವಾಗುತ್ತಿದೆ ಎಂದು ಅಂಚೆ ಕಚೇರಿ ಹಾಗೂ ಎಲ್ಐಸಿ ನೌಕರರು ಆತಂಕ ವ್ಯಕ್ತಪಡಿಸಿದರು.
ಕೇಂದ್ರದ ಮೋದಿ ಸರ್ಕಾರ ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಹೇಳಿ, ಇದೀಗ ಕೈಕಟ್ಟಿ ಕುಳಿತಿದೆ. ಈಗಲಾದರೂ ಸ್ವಾಮಿನಾಥನ್ ವರದಿ ಜಾರಿ ಮಾಡಿ, ರೈತರನ್ನು ಉಳಿಸಬೇಕಿದೆ ಎಂದು ರೈತ ಸಂಘದ ಕಾರ್ಯಕರ್ತರು ಆಗ್ರಹಿಸಿದರು.
ಇನ್ನು, ಬಂದ್ಗೆ ಕರೆ ನೀಡಿದ್ದ ಕೆಲ ಸಂಘಟನೆಗಳು ಬೀದಿಗಿಳಿಯದ ಕಾರಣ, ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ಕಾರಿ ಹಾಗೂ ಖಾಸಗಿ ಬಸ್ಗಳು ತಮ್ಮ ಸೇವೆಯನ್ನು ಎಂದಿನಂತೆ ಮುಂದುವರೆಸಿದ್ದವು. ಅಂಗಡಿ ಮುಂಗಟ್ಟುಗಳು, ಮಾರುಕಟ್ಟೆ ಎಲ್ಲವೂ ಯಥಾ ರೀತಿಯಲ್ಲಿದ್ದವು.