ಶಿವಮೊಗ್ಗ : ಕುಡಿಯುವ ನೀರಿಗಾಗಿ ಮಹಾನಗರ ಪಾಲಿಕೆ ಎದುರು ಬಿಂದಿಗೆ ಹಿಡಿದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ 34ನೇ ವಾರ್ಡ್ನ ಮದಾರಿಪಾಳ್ಯದಲ್ಲಿ ಕಳೆದ ಏಳು ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಬರುತ್ತಿಲ್ಲ. ಮಹಾನಗರ ಪಾಲಿಕೆಗೆ ಎಷ್ಟೇ ದೂರು ನೀಡಿದರು ಸಮಸ್ಯೆ ಬಗೆಹರಿಸುತ್ತಿಲ್ಲ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಯುಜಿಡಿ ಕಾಮಗಾರಿ ಮಾಡುವ ಸಲುವಾಗಿ ಎಲ್ಲಾ ಪೈಪ್ ಲೈನ್ ಗಳನ್ನ ಹಾಳುಮಾಡಿದ್ದಾರೆ. ಹಾಳು ಮಾಡಿದ ಪೈಪ್ ಲೈನ್ ನ್ನ ಏಳು ತಿಂಗಳಾದರು ಸರಿ ಮಾಡಿಲ್ಲ. ಇದರಿಂದ ನೀರಿಗೆ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮದಾರಿಪಾಳ್ಯದಲ್ಲಿ 600ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಮಹಾನಗರ ಪಾಲಿಕೆ ಕುಡಿಯಲು ಕೇವಲ ಒಂದು ಟ್ಯಾಂಕ್ ನೀರನ್ನ ನೀಡುತ್ತಿದೆ. ಈ ನೀರು ಸಾಕಾಗುವುದಿಲ್ಲ. ಹಾಗಾಗಿ ಕೂಡಲೇ ತಮ್ಮ ಸಮಸ್ಯೆ ಬಗೆಹರಿಸಬೇಕೆಂದು ಮಹಾನಗರ ಪಾಲಿಕೆ ಮುಂದೆ ಬಿಂದಿಗೆ ಹಿಡಿದು ಪ್ರತಿಭಟಿಸಿದರು.