ಶಿವಮೊಗ್ಗ: ಕಸ ವಿಲೇವಾರಿ ಘಟಕದಲ್ಲಿನ ಲೋಪದೋಷ ಸರಿಪಡಿಸಬೇಕೆಂದು ಒತ್ತಾಯಿಸಿ, ತಾಜ್ಯ ವಿಲೇವಾರಿ ಘಟಕದ ಎದುರು ಪುರದಾಳು ಗ್ರಾಮಸ್ಥರು ವಾಹನ ತಡೆದು ಪ್ರತಿಭಟನೆ ನಡೆಸಿದರು.
ಪುರದಾಳು ಗ್ರಾಮಕ್ಕೆ ಹೊಂದಿಕೊಂಡಂತೆ ಘನತ್ಯಾಜ್ಯ ವಿಲೇವಾರಿ ಘಟಕವಿದ್ದು, ಅವೈಜ್ಞಾನಿಕ ಮತ್ತು ಅಸಮರ್ಪಕ ತಾಜ್ಯ ವಿಲೇವಾರಿ ಖಂಡಿಸಿ ಮಹಾನಗರ ಪಾಲಿಕೆ ಕಸ ಸಾಗಣೆ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು. ಈ ಹಿಂದೆ ಮಹಾನಗರ ಪಾಲಿಕೆಯಿಂದ ಕೊಟ್ಟ ಭರವಸೆಯನ್ನು ಇನ್ನು ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪುರದಾಳು ಗ್ರಾಮ ಪಂಚಾಯಿತಿಯ ಹನುಮಂತಪುರ ಗ್ರಾಮದಲ್ಲಿ ಮಹಾನಗರ ಪಾಲಿಕೆಯ ಹೈದ್ರಾಬಾದ್ ಮೂಲದ ರಾಮ್ಕಿ ಕಂಪನಿ ಘನತಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಈ ಘಟಕದಲ್ಲಿ ತಾಜ್ಯ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಹಾಗೆ ಸ್ವಚ್ಛತೆ ಇಲ್ಲದ ಕಾರಣ ಕಾಯಿಲೆಗಳು ಹೊರಡುತ್ತವೆ ಎಂದು ದೂರಿದರು.
ತಾಜ್ಯ ವಿಲೇವಾರಿ ಘಟಕದ ಒಳಗೆ ಮತ್ತು ಘಟಕದ ವ್ಯಾಪ್ತಿಯ ಅನುಪಿನಕಟ್ಟೆ, ಹನುಮಂತಪುರ, ಬೇಲೂರು, ಶಾಂತಿಪುರ ಗ್ರಾಮಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಇದರ ತಡೆಗೆ ಫಾಗಿಂಗ್ ಮಾಡಬೇಕು ಆದರೆ ಅಂತಹ ಯಾವುದೇ ಕೆಲಸ ಮಾಡುತ್ತಿಲ್ಲ. ಅಲ್ಲದೇ ಪಾಲಿಕೆ ವಾಹನಗಳು ರಸ್ತೆ ಮೇಲೆ ಕಸ ಚೆಲ್ಲಿಕೊಂಡು ಸಂಚರಿಸುತ್ತಿವೆ. ಇದರಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಜನ-ಜಾನುವಾರುಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಈ ಹಿಂದೆ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಯಾವ ಭರವಸೆಗಳು ಇನ್ನೂ, ಈಡೇರಿದ ಕಾರಣ ಗ್ರಾಮಸ್ಥರು ವಾಹನಗಳನ್ನ ತಡೆದು ಪ್ರತಿಭಟಿಸಿದ್ದಾರೆ.