ಶಿವಮೊಗ್ಗ: ಮೆಡಿಕಲ್ ಕಾಲೇಜು ಮತ್ತು ಮೆಗ್ಗಾನ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರನ್ನು ನೇರ ನೇಮಕ ಮಾಡಿಕೊಂಡು ಪ್ರತಿ ತಿಂಗಳು ವೇತನ ಪಾವತಿಸಬೇಕೆಂದು ಒತ್ತಾಯಿಸಿ ಶ್ರೀ ಚೌಡೇಶ್ವರಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ (ಸಿಮ್ಸ್)ಯ ಗುತ್ತಿಗೆ ಕಾರ್ಮಿಕ ಸಂಘದಿಂದ ಸಿಮ್ಸ್ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಮೆಡಿಕಲ್ ಕಾಲೇಜು ಮತ್ತು ಮೆಗ್ಗಾನ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಸಿಬ್ಬಂದಿ ಮತ್ತು ಸ್ಟಾಫ್ ನರ್ಸ್, ಅಟೆಂಡರ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಮಾಸಿಕ ವೇತನವನ್ನು ಕಾಲಕಾಲಕ್ಕೆ ನೀಡುತ್ತಿಲ್ಲವಂತೆ. ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ತಮ್ಮನ್ನು ಸಿಮ್ಸ್ ವತಿಯಿಂದ ನೇರ ನೇಮಕ ಮಾಡಿಕೊಂಡು ಪ್ರತಿ ತಿಂಗಳು ವೇತನ ನೀಡಬೇಕೆಂದು ಆಗ್ರಹಿಸಿದರು.
ಮೆಗ್ಗಾನ್ ಆಸ್ಪತ್ರೆ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಮಾರು ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿ, ಸ್ಟಾಫ್ ನರ್ಸ್ ಮತ್ತು ಗ್ರೂಪ್- ಡಿ ನೌಕರರಾಗಿ ನಾವು ಕಾರ್ಯನಿರ್ವಹಿಸುತ್ತಿದ್ದು, ಒಂದು ವರ್ಷದಿಂದ ಸರಿಯಾಗಿ ವೇತನ ಸಿಗದೇ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ದೂರಿದರು.
ಇನ್ನು, ಖಾಯಂ ಹಾಗೂ ಒಳಗುತ್ತಿಗೆ ನೌಕರರಿಗೆ ಕಾಲಕಾಲಕ್ಕೆ ಸರಿಯಾಗಿ ವೇತನ ನೀಡಲಾಗುತ್ತಿದೆ. ಹೊರಗುತ್ತಿಗೆ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.