ಶಿವಮೊಗ್ಗ: ಅಸ್ಸೋಂನಲ್ಲಿ ಸಾವನ್ನಪ್ಪಿದ ರಿಪ್ಪನ್‌ಪೇಟೆಯ ಯೋಧ ಸಂದೀಪ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು. ಬುಧವಾರ ಮುಂಜಾನೆ 4 ಗಂಟೆಗೆ ಯೋಧನ ಪಾರ್ಥಿವ ಶರೀರ ಶಬರೀಶ ನಗರದಲ್ಲಿರುವ ಮೃತ ಯೋಧನ ಸ್ವಗೃಹಕ್ಕೆ ಆಗಮಿಸಿತು. ಯೋಧ ಸಂದೀಪ್ ಅವರ ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತ್ತು. ಅಲ್ಲಿ ಸೇರಿದ್ದ ಜನರ ಕಣ್ಣುಗಳು ಕೂಡ ತೇವಗೊಂಡಿದ್ದವು.
ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪ ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ವಾಹನದ ಮೂಲಕ ಯೋಧನ ಪಾರ್ಥಿವ ಶರೀರವನ್ನು ಶಬರೀಶನಗರದ ಸ್ವಗೃಹದಿಂದ ವಿನಾಯಕ ವೃತ್ತದವರೆಗೂ ಮೆರವಣಿಗೆ ಮೂಲಕ ಕರೆತರಲಾಯಿತು. ಯುವಕರು ಸೇರಿದಂತೆ ಗ್ರಾಮಸ್ಥರು ಅಮರ್ ಹೈ, ಸಂದೀಪ್ ಅಮರ್ ಹೈ ಎಂಬ ಘೋಷಣೆ ಕೂಗಿದರು. ಮೆರವಣಿಗೆ ನಂತರ ವಿನಾಯಕ ವೃತ್ತದಲ್ಲಿ ಸಂದೀಪ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಿಪ್ಪನ್‌ಪೇಟೆಯ ಜನರು ತಂಡೋಪತಂಡವಾಗಿ ಆಗಮಿಸಿ ಯೋಧನ ಅಂತಿಮ ದರ್ಶನ ಪಡೆದರು.
ಇದೇ ವೇಳೆ ಮಾತನಾಡಿದ ಮೃತ ಯೋಧನಿಗೆ ಪಾಠ ಮಾಡಿದ್ದ ಶಿಕ್ಷಕ ರಾಮಕೃಷ್ಣ ಅವರು, ಸಂದೀಪ್ ಸೇನೆಯಲ್ಲಿರುವಾಗಲೇ ಸಾವನ್ನಪ್ಪಿರುವುದು ತುಂಬಾ ನೋವು ತಂದಿದೆ. ಮೊದಲ ಬಾರಿಗೆ ರಿಪ್ಪನ್ಪೇಟೆಯಲ್ಲಿ ಇಷ್ಟೊಂದು ಜನ ಸೇರಿರೋದನ್ನು ನೋಡುತ್ತಿದ್ದೇನೆ. ಬಹಳ ಸ್ನೇಹ ಜೀವಿಯಾಗಿದ್ದ ಯೋಧ ಸಂದೀಪ್ ಎಲ್ಲಾ ಧರ್ಮದವರೊಂದಿಗೂ ವಿನಯ ಗೌರವದಿಂದ ನಡೆದುಕೊಳ್ಳುತ್ತಿದ್ದ. ಆತ ಇನ್ನು ನೆನಪು ಮಾತ್ರ. ಕ್ರೀಡೆಯಲ್ಲಿ ಮುಂದಿದ್ದ ಸಂದೀಪ್, ಸೇನೆಗೆ ಸೇರಬೇಕೆಂಬ ಹಂಬಲ ಇಟ್ಟುಕೊಂಡು ದಿನನಿತ್ಯ ಮುಂಜಾನೆ ವರ್ಕೌಟ್, ರನ್ನಿಂಗ್ ಮಾಡುವುದನ್ನ ನಾನು ನೋಡುತ್ತಿದ್ದೆ ಎಂದು ಸ್ಮರಿಸಿದರು.
ಸ್ವಯಂ ಘೋಷಿತ ಬಂದ್: ಇಂದು ರಿಪ್ಪನ್ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂ ಘೋಷಿತ ಬಂದ್ ಆಗಿದ್ದವು. ಭಾರತೀಯ ಸೇನೆ ಕರ್ತವ್ಯದಲ್ಲಿ ಇರುವಾಗ ಸಾವನ್ನಪ್ಪಿದ ಯೋಧನಿಗೆ ಗೌರವಾರ್ಥವಾಗಿ ಜನರು ಸ್ವಯಂ ಘೋಷಿತ ಬಂದ್ ಮಾಡಿದರು. ಕಣ್ಣೀರು ಸುರಿಸುತ್ತ ಯೋಧನ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾಗಿದರು.
ಯೋಧ ಸಾವನ್ನಪ್ಪಿದ್ದು ಹೇಗೆ? : ಅಸ್ಸೋಂ ರೈಫಲ್ಸ್ 4 ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಿಪ್ಪನ್‌ಪೇಟೆಯ ಮೃತ ಯೋಧ ಸಂದೀಪ್ ಅವರು ಮಂಗಳವಾರ ಕರ್ತವ್ಯದಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಡ ಕುಟುಂಬದಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲೇ ದೇಶ ಸೇವೆ ಮಾಡುವ ಆಸೆ ಕಂಡು ಸೇನೆಗೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಗೃಹ ಸಚಿವರ ಭೇಟಿ, ಸಾಂತ್ವನ : ವಿಷಯ ತಿಳಿಯುತ್ತಿದ್ದಂತೆ ಮೃತ ಯೋಧ ಸಂದೀಪ್ ಅವರ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಸಾಂತ್ವನ ಹೇಳಿದರು. ಸಂದೀಪ್ ದೇಶ ಸೇವೆಗೆ ಹೋಗಿದ್ದು ಈ ರೀತಿ ಸಾವನ್ನಪ್ಪಿದ್ದು ದುರಂತವಾಗಿದೆ. ಸಂದೀಪ್ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಕುಟುಂಬಸ್ಥರಿಗೆ ಧೈರ್ಯ ಹೇಳಿದರು.
ಇದನ್ನೂ ಓದಿ :ಅಸ್ಸಾಂ ರೈಫಲ್ಸ್ನಲ್ಲಿದ್ದ ರಿಪ್ಪನ್‌ಪೇಟೆಯ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ