ಶಿವಮೊಗ್ಗ: ಕೋವಿಡ್-19ನಿಂದಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆಯಲ್ಲಿದ್ದೇವೆ. ಇದರಿಂದ ಸರ್ಕಾರ ಶಾಲೆಗಳನ್ನು ಪ್ರಾರಂಭಿಸುವ ಕುರಿತು ಇನ್ನೂ ಚಿಂತನೆ ನಡೆಸಿಲ್ಲ. ಆದರೆ, ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದು ಸದ್ಯ ಆನ್ಲೈನ್ ಶಿಕ್ಷಣಕ್ಕೆ ಅವಕಾಶ ಮಾಡಿ ಕೊಟ್ಟಿದೆ.
ಈ ಆನ್ಲೈನ್ ಶಿಕ್ಷಣ ನಗರ ಪ್ರದೇಶದ ಮಕ್ಕಳಿಗೆ ಮಾತ್ರ ಅನುಕೂಲಕವಾಗುತ್ತದೆಯೇ ಹೊರತು ಗ್ರಾಮೀಣ ಭಾಗದ ಮಕ್ಕಳಿಗಲ್ಲ. ನಗರ ಭಾಗದ ಶೇಕಡಾ 98ರಷ್ಟು ಪೋಷಕರಿಗೆ ಆನ್ಲೈನ್ ಶಿಕ್ಷಣ ಮಾಡಿರುವುದು ಸಂತಸ ತಂದಿದೆ. ಮಕ್ಕಳಿಗೆ ಶಿಕ್ಷಣ ಸಿಗುತ್ತದೆ ಅನ್ನುವುದಕ್ಕಿಂತ, ಮಕ್ಕಳು ಮನೆಯಲ್ಲಿ ನೀಡುತ್ತಿದ್ದ ಕಾಟದಿಂದ ಬೇಸತ್ತು ಪೋಷಕರು ಒಪ್ಪಿಕೊಂಡಿದ್ದಾರೆ.
ಆನ್ಲೈನ್ ಶಿಕ್ಷಣಕ್ಕೆ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ವಿರೋಧ:
ಆನ್ಲೈನ್ ಶಿಕ್ಷಣಕ್ಕೆ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ವಿರೋಧ ವ್ಯಕ್ತವಾಗಿದೆ. ಆನ್ಲೈನ್ ಶಿಕ್ಷಣಕ್ಕೆ ಪವರ್ ಹಾಗೂ ಟವರ್ ಅತೀ ಮುಖ್ಯವಾಗಿದೆ. ಆದರೆ, ಮಲೆನಾಡಿನಲ್ಲಿ ಪವರ್ ಹಾಗೂ ಟವರ್ ಎರಡೂ ಇಲ್ಲ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ದಿನಕ್ಕೊಂದು ಬಾರಿ ಬಂದು ಹೋಗುತ್ತದೆ.
ಹೀಗಿರುವಾಗ ವಿದ್ಯಾರ್ಥಿಗಳು ಹೇಗೆ ಆನ್ಲೈನ್ ಕ್ಲಾಸ್ ನೋಡಲು ಸಾಧ್ಯವಾಗುತ್ತದೆ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ. ಮಲೆನಾಡಿನ ಭಾಗದಲ್ಲಿ ಮೊಬೈಲ್ ಟವರ್ಗಳ ಸಮಸ್ಯೆ ವಿಪರೀತವಿದೆ. ಇಲ್ಲಿ ಸಾಮಾನ್ಯವಾಗಿ ಪೋನ್ನಲ್ಲಿ ಮಾತನಾಡಬೇಕಾದರೆ, ಮನೆ ಮೇಲೆ ಹತ್ತಬೇಕು, ಮರ ಏರಬೇಕು ಇಲ್ಲವೇ ಸಮೀಪದ ಬೆಟ್ಟ ಹತ್ತುವ ಸ್ಥಿತಿ ಇದೆ.
ಇಂತಹ ಸ್ಥಿತಿಯಲ್ಲಿ ಮೊಬೈಲ್ ಇಂಟರ್ನೆಟ್ ನೆಟ್ವರ್ಕ್ ದೊರೆಯುವುದು ಸಾಹಸವೇ ಸರಿ. ಇಂತಹ ಸ್ಥಿತಿಯಿಂದ ತೀರ್ಥಹಳ್ಳಿ ತಾಲೂಕು ಕೆಂದಾಳುಬೈಲು ಹೊರತಾಗಿಲ್ಲ. ಕುಂದಾದ್ರಿ ಬೆಟ್ಟದ ಬುಡದಲ್ಲಿ ಇರುವ ಪುಟ್ಟ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇದೆ. ಇಲ್ಲಿನ ಬಹುತೇಕ ಮಂದಿ ಕೂಲಿ ಮಾಡಿ ಜೀವನ ನಡೆಸುವವರು. ಇವರು ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ಹಿಂದೆ ಮುಂದೆ ನೋಡುತ್ತಾರೆ. ಅದರಲ್ಲೂ ಮಕ್ಕಳಿಗೆ ಮೊಬೈಲ್ ಕೊಡಿಸುವುದು ಆಗದ ಮಾತು.
ಮೊಬೈಲ್ ಇದ್ದರೂ ಟವರ್ ಇಲ್ಲ. ಮೊಬೈಲ್ ಚಾರ್ಜ್ ಮಾಡಲು ಪವರ್ ಇರುವುದಿಲ್ಲ. ಇದು ಇಲ್ಲಿನ ಸಮಸ್ಯೆ. ವಿದ್ಯಾಭ್ಯಾಸದ ಬಗ್ಗೆ ಅರಿವು ಇರುವುದರಿಂದ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆ. ಆದರೆ, ಅವರಿಗೆ ಮೊಬೈಲ್ ನೀಡುವ ಶಕ್ತಿ ಇರುವುದಿಲ್ಲ. ಅದಕ್ಕೆ ಪ್ರತಿ ತಿಂಗಳು ರಿಚಾರ್ಜ್ ಮಾಡಿಸಲು ಸಹ ಆಗುವುದಿಲ್ಲ. ಇಂತಹ ಸ್ಥಿತಿ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಇದೆ. ಸದ್ಯ ಹೈಸ್ಕೂಲ್‌ನವರಿಗೆ ಚಂದನ ವಾಹಿನಿಯಲ್ಲಿ ನಡೆಯುವ ಕ್ಲಾಸ್ ಸಹ ವಿದ್ಯುತ್ ಇಲ್ಲದೇ ನೋಡಲು ಆಗುವುದಿಲ್ಲ.
ಆನ್ಲೈನ್ ಕ್ಲಾಸ್ ಬಗ್ಗೆ ಒಲವು ತೋರದ ಮಲೆನಾಡಿನ ಮಕ್ಕಳು:
ಆನ್ಲೈನ್ ಕ್ಲಾಸ್ಗಳು ಸಾಮಾನ್ಯ ತರಗತಿಗಿಂತ ಭಿನ್ನವಾಗಿರುತ್ತವೆ. ಸಾಮಾನ್ಯ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡಿದ ಮೇಲೆ ಅಲ್ಲಿಯೇ ಚರ್ಚೆ ನಡೆಸಬಹುದು. ಆನ್ಲೈನ್ ಕ್ಲಾಸ್ನಲ್ಲಿ ಅವರು ಹೇಳಿದ್ದು, ಬೇಗ ಅರ್ಥವಾಗುವುದಿಲ್ಲ. ಪ್ರಶ್ನೆ ಕೇಳಲು ಸಹ ಆಗುವುದಿಲ್ಲ. ಇದರಿಂದ ಆನ್ಲೈನ್ ಕ್ಲಾಸ್ಗಳನ್ನು ಮಲೆನಾಡಿನ ವಿದ್ಯಾರ್ಥಿಗಳು ಅಷ್ಟಾಗಿ ಇಷ್ಟಪಡುತ್ತಿಲ್ಲ.
ಸದ್ಯ ಚಂದನ ವಾಹಿನಿಯಲ್ಲಿ ಹೈಸ್ಕೂಲ್ ಮಕ್ಕಳಿಗೆ ನಡೆಯುತ್ತಿರುವ ಆನ್ಲೈನ್ ಕ್ಲಾಸ್ನಲ್ಲಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗುತ್ತಿದೆ. ಇವರು ಬರೆದುಕೊಳ್ಳುವಷ್ಟರಲ್ಲಿ ಅಲ್ಲಿ ಬೇರೆ ವಿಷಯಕ್ಕೆ ಹೋಗಲಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಕೇವಲ ಕೇಳುವುದಕ್ಕೆ ಮಾತ್ರ ಆಗುತ್ತಿದೆ. ನೋಟ್ಸ್ ಬರೆದುಕೊಳ್ಳಲು ಆಗುತ್ತಿಲ್ಲ.
ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿ, ಆನ್ಲೈನ್ ಕ್ಲಾಸ್ ಮಕ್ಕಳ ಶಿಕ್ಷಣಕ್ಕೆ ಅವಶ್ಯಕವಾಗಿದ್ದು, ಸರ್ಕಾರ ತೀರ್ಮಾನ ತೆಗದುಕೊಂಡಿದೆ. ಮಲೆನಾಡಿನಲ್ಲಿನ ಟವರ್ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಆನ್ಲೈನ್ ಶಿಕ್ಷಣ ಮಲೆನಾಡಿಗೆ ಸರಿಯಲ್ಲ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.