ಶಿವಮೊಗ್ಗ: ಆಗಸ್ಟ್ ತಿಂಗಳಿನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುರಿದ ಮಳೆಗೆ ಉಂಟಾದ ಜೀವಹಾನಿ, ಜಾನುವಾರು ಸಾವು, ಮನೆ ಕುಸಿತ ಪ್ರಕರಣ ಹಾಗೂ ಬೆಳೆ ಹಾನಿಗೆ ಜಿಲ್ಲಾಡಳಿತ ಸಮರ್ಪಕವಾಗಿ ಪರಿಹಾರ ಒದಗಿಸಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 18 ಜೀವಹಾನಿಯಾಗಿದೆ. ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂದಂತೆ 90 ಲಕ್ಷ ರೂ ಗಳನ್ನು ಬಿಡುಗಡೆ ಮಾಡಲಾಗಿದೆ.
ಮನೆ ಕಳೆದು ಕೊಂಡವರು, ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ಸೇರಿದಂತೆ ಒಟ್ಟು 7,415 ಕುಟುಂಬಗಳಿಂದ ಪರಿಹಾರಕ್ಕಾಗಿ ಅರ್ಜಿ ಬಂದಿದೆ. ಇವರಿಗೆ ತಲಾ 10 ಸಾವಿರ ರೂಗಳಂತೆ ಒಟ್ಟು 7 ಕೋಟಿ 41 ಲಕ್ಷದ 50 ಸಾವಿರ ರೂ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದ್ರು.
ಪ್ರವಾಹ ಪೀಡಿತ ಮನೆಗಳನ್ನು ಎ,ಬಿ ಹಾಗೂ ಸಿ ಕೆಟಗರಿ ಮಾಡಿ ಪರಿಹಾರ ನೀಡಲಾಗುತ್ತಿದೆ. ಈ ರೀತಿಯಲ್ಲಿ ಕೆಲ ಮನೆಗಳಿಗೆ ಪರಿಹಾರ ನೀಡಲಾಗಿದೆ. ಇನ್ನೂ ಕೆಲವು ಕಡೆ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗುತ್ತಿದೆ ಎಂದರು. ಮಳೆಯಿಂದ ಒಟ್ಟು 51 ಜಾನುವಾರುಗಳು ಮೃತಪಟ್ಟಿವೆ. ಇದರಲ್ಲಿ 34 ಜಾನುವಾರುಗಳಿಗೆ 8.87 ಲಕ್ಷ ರೂ ಪರಿಹಾರ ವಿತರಿಸಲಾಗಿದೆ. ಉಳಿದಂತೆ 17 ಜಾನುವಾರುಗಳಿಗೆ 5.38 ಲಕ್ಷ ರೂ ಪರಿಹಾರದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಬೆಳೆಹಾನಿಯಾದ 6.284 ರೈತರಿಗೆ 6 ಕೋಟಿ 28 ಲಕ್ಷದ 30 ಸಾವಿರ ರೂ. ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ 482 ಕೆರೆಗಳ ದುರಸ್ಥಿಗೆ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯಿತಿ ಮುಖಾಂತರ ಮನವಿ ಸಲ್ಲಿಸಲಾಗಿದೆ ಎಂದರು.
ಅಲ್ಲದೆ ಜಿಲ್ಲೆಯಲ್ಲಿ ಹಾಳಾದ 828 ಶಾಲೆಗಳ 1,707 ಕೊಠಡಿಗಳ ದುರಸ್ಥಿಗೆ 34 ಕೋಟಿ 48 ಲಕ್ಷದ 54 ಸಾವಿರ ರೂ. ಮಂಜೂರಾತಿ ದೊರಕಿದ್ದು ಕಾಮಗಾರಿ ನಡೆಯುತ್ತಿದೆ ಎಂದರು.