ಶಿವಮೊಗ್ಗ: ಕೊರೊನಾ ಲಸಿಕೆ ಸಂಗ್ರಹಕ್ಕೆ ಜಿಲ್ಲೆಯಲ್ಲಿ ಸಿದ್ಧತೆ ಆರಂಭವಾಗಿದೆ. ಕೋಲ್ಡ್ ಸ್ಟೋರೇಜ್ಗಳನ್ನು ಗುರುತಿಸಿ ವ್ಯಾಕ್ಸಿನ್ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವ್ಯಾಕ್ಸಿನ್ ಹಂಚಿಕೆ ಮಾಡಲು ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕೂಡ ರಚಿಸಲಾಗಿದೆ.
ಕೊರೊನಾ ರೋಗ ನಿಯಂತ್ರಣ ಮಾಡಲು ಅಗತ್ಯವಿರುವ ಲಸಿಕೆ ಭಾರತದಲ್ಲಿ ಯಾವುದೇ ಸಂದರ್ಭದಲ್ಲಿ ಬೇಕಾದರೂ ಸಿದ್ಧವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನು ಜನರಿಗೆ ತಲುಪಿಸಲು ರಾಜ್ಯ ಸರ್ಕಾರ ಈಗಾಗಲೇ ಪ್ಲಾನ್ ಮಾಡಿದೆ. ಬೆಂಗಳೂರು, ಶಿವಮೊಗ್ಗ, ಬಳ್ಳಾರಿಯಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಸಿಕೆ ಸಂಗ್ರಹಕ್ಕೆ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ.
ಶಿವಮೊಗ್ಗದ ನಾಲ್ಕು ಕಡೆಯಲ್ಲಿ ಸ್ಟೋರೇಜ್ ಪಾಯಿಂಟ್ಗಳನ್ನು ಗುರುತಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆ, ಔಷಧ ಸಂಗ್ರಹ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆ ಮತ್ತು ಕೆಎಂಎಫ್ನಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಡೀಪ್ ಫ್ರೀಜರ್ಗಳನ್ನು ಗುರುತಿಸಲಾಗಿದೆ. ಶಿವಮೊಗ್ಗ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗೂ ಇಲ್ಲಿಂದಲೇ ಲಸಿಕೆ ಪೂರೈಕೆಯಾಗಲಿದೆ. ಹಾಗಾಗಿ ಡೀಪ್ ಫ್ರೀಜರ್ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ.
ಓದಿ: ತೀರ್ಥಹಳ್ಳಿ ಬಳಿ ಕ್ಯಾಂಟರ್ ಪಲ್ಟಿಯಾಗಿ 10 ಜಾನುವಾರುಗಳ ಸಾವು
ಜಿಲ್ಲೆಯಲ್ಲಿ ಲಸಿಕೆ ಪೂರೈಕೆಗೆ 113 ಕಡೆಯಲ್ಲಿ ಕೋಲ್ಡ್ ಚೈನ್ ಪಾಯಿಂಟ್ ಕೂಡ ಗುರುತಿಸಲಾಗಿದೆ. ಜೊತೆಗೆ ತಾಲೂಕು ಹಂತದಲ್ಲಿ ವ್ಯಾಕ್ಸಿನೇಷನ್ ಟಾಸ್ಕ್ ಫೋರ್ಸ್ಗಳನ್ನು ರಚಿಸಲಾಗಿದೆ. ಮೊದಲ ಹಂತದಲ್ಲಿ ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡ ಸಿಬ್ಬಂದಿಗೆ ಲಸಿಕೆ ಹಾಕಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 20,549 ಮಂದಿಯನ್ನು ಗುರುತಿಸಲಾಗಿದೆ.