ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಡಳಿತ ನಡೆಸಲು ಕೆ.ಎಸ್. ಈಶ್ವರಪ್ಪ ವಿಫಲರಾಗಿದ್ದಾರೆ. ಹಾಗಾಗಿ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದರೆ ಮುಖ್ಯಮಂತ್ರಿಗಳೇ ರಾಜೀನಾಮೆ ಪಡೆದು ಜಿಲ್ಲೆಯನ್ನು ಕಾಪಾಡಬೇಕು ಎಂದು ಮಾಜಿ ಶಾಸಕ ಪ್ರಸನ್ನ ಕುಮಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಉಸ್ತುವಾರಿ ಸಚಿವರಾದಾಗಿನಿಂದ ಇಲ್ಲಿಯವರೆಗೂ ಆಡಳಿತ ನಿಯಂತ್ರಿಸುವಲ್ಲಿ ಹಾಗೂ ಆಡಳಿತ ನಡೆಸುವಲ್ಲಿ ಅಲ್ಲದೇ ಇನ್ನೂ ಸಾಕಷ್ಟು ಜವಾಬ್ದಾರಿ ನಿಭಾಯಿಸುವಲ್ಲಿ ಈಶ್ವರಪ್ಪ ವಿಫಲರಾಗಿದ್ದಾರೆ. ಹಾಗಾಗಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ರೌಡಿಸಂ, ಅಕ್ರಮ ಮದ್ಯ ಮಾರಾಟ, ಗಾಂಜಾ ಮಾರಾಟ ನಡೆಯುತ್ತಿದೆ. ಜಿಲ್ಲಾ ಮಂತ್ರಿಯಾಗಿ ನಿರ್ವಹಣೆಯ ಕೂರತೆಯಿಂದ ತಮ್ಮ ತಪ್ಪನ್ನು ಅಧಿಕಾರಿಗಳ ಮೇಲೆ ಹಾಕಿ ತಾವು ಜಾರಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಅನೇಕ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ತಮಗೆ ಬೇಕಾದವರನ್ನು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಹೋರಾಡುತ್ತಿರುವ ಪೋಲಿಸ್ ಅಧಿಕಾರಿಗಳ ಬಗ್ಗೆ ಮಾತನಾಡಿರುವುದು ಅವರ ಆತ್ಮ ಸ್ಥೈರ್ಯ ಕಳೆದುಕೊಳ್ಳುವಂತೆ ಮಾಡುತ್ತಿರುವುದು ಸರಿಯಲ್ಲ. ಈಶ್ವರಪ್ಪ ತಮ್ಮ ಹಿಂಬಾಲಕರನ್ನು ಕರೆದುಕೊಂಡು ಕೇವಲ ಗುದ್ದಲಿ ಪೂಜೆ ಮಾಡುವ ಮೂಲಕ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ, ಹೊರತು ಯಾವುದೇ ಜನಪರ ಕೆಲಸ ಮಾಡದೇ ನಿಷ್ಕ್ರಿಯ ಜಿಲ್ಲಾ ಮಂತ್ರಿಗಳಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.