ಶಿವಮೊಗ್ಗ: ವಾಜಪೇಯಿ ಬಡಾವಣೆಯ ಲೋಕಾಯುಕ್ತ ತನಿಖೆ ರದ್ದು ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು ಹೇಳಿಕೆಯನ್ನು ಹಿಂಪಡೆಯಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ. ಡಿ. ಮೇಘರಾಜ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಬದ್ಧವಾಗಿ ಹೇಳಿಕೆ ನೀಡಿರುವ ಪ್ರಸನ್ನಕುಮಾರ್ ಈಶ್ವರಪ್ಪನವರ ಕ್ಷಮೆ ಕೇಳಲಿ ಇಲ್ಲವೇ ಮಾನನಷ್ಟ ಮೊಕದ್ದೆಮೆ ಎದುರಿಸಲಿ ಎಂದರು.
![ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ. ಡಿ. ಮೇಘರಾಜ್](https://etvbharatimages.akamaized.net/etvbharat/prod-images/kn-smg-03-bjp-president-ka10011_08062020161319_0806f_01960_232.jpg)
ತನಿಖಾ ವರದಿಯಲ್ಲಿನ ಅಂಶಗಳು ಇವರಿಗೆ ಗೊತ್ತಿವೆ ಎಂಬುದಾದರೆ ವರದಿಯ ಅಂಶಗಳು ಸೋರಿಕೆ ಆಗಿವೆ ಎಂದಾಗುತ್ತದೆ. ಅಲ್ಲದೆ ಹಿಂದಿನ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಬಗ್ಗೆ ಏಕೆ ಕ್ರಮಕೈಗೊಳ್ಳಲಿಲ್ಲ ಎಂಬುದನ್ನು ಅವರು ಹೇಳಲಿ ಎಂದರು.
ನಗರದಲ್ಲಿ ನಿರ್ಮಾಣವಾಗುತ್ತಿರುವ ಆಚಾರ್ಯರ ಭವನಕ್ಕೆ ಈಶ್ವರಪ್ಪಅಡ್ಡಗಾಲು ಹಾಕುತ್ತಿದ್ದಾರೆ ಎಂದು ಸಹ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಈಶ್ವರಪ್ಪ ಎಂದಿಗೂ ಈ ರೀತಿ ಮಾಡುವವರಲ್ಲ. ಅವರೇ ಈ ಭವನ ನಿರ್ಮಾಣಕ್ಕೆ 50ಲಕ್ಷರೂ. ಕೊಟ್ಟಿದ್ದಾರೆ. ಪ್ರಸನ್ನಕುಮಾರ್ ಅವರು ಜನಾದೇಶವನ್ನು ಪಾಲಿಸುತ್ತಿಲ್ಲ.ಈಶ್ವರಪ್ಪನವರ ವಿರುದ್ಧ ಅನವಶ್ಯಕವಾಗಿ ಆರೋಪ ಮಾಡುತ್ತಿದ್ದಾರೆ ಎಂದರು.