ರಾಜ್ಯದಲ್ಲಿ ಇಂದು 2ನೇ ಹಂತದ ಮತದಾನ ನಡೆಯುತ್ತಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ನಾಯಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪುತ್ರ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮತ್ತೋರ್ವ ಪುತ್ರ ಬಿ.ವೈ. ವಿಜಯೇಂದ್ರ, ಸೊಸೆಯಂದಿರಾದ ತೇಜಸ್ವಿನಿ ಮತ್ತು ಪ್ರೇಮ ಅವರ ಜೊತೆಗೂಡಿ ಶಿಕಾರಿಪುರದ ಮತಗಟ್ಟೆ ಸಂಖ್ಯೆ 134 ರಲ್ಲಿ ಮತ ಹಾಕಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ್ ತಮ್ಮ ಪತ್ನಿ ರೇಶ್ಮಾ ಜೊತೆಗೆ ಆಗಮಿಸಿ ಮತಗಟ್ಟೆ ಸಂಖ್ಯೆ 235 ರಲ್ಲಿ ಮೊದಲ ವೋಟ್ ಮಾಡಿದರು.
ಮಾಜಿ ಸಚಿವ, ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ಇಳಿ ವಯಸ್ಸಿನಲ್ಲೂ ಹುರುಪಿನಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಜಿಲ್ಲೆಯ ಭಾಲ್ಕಿ ಪಟ್ಟಣದ ಕೃಷಿ ಇಲಾಖೆ ಮತಗಟ್ಟೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಬಂದು ವೋಟ್ ಮಾಡಿದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಸ್ವಗ್ರಾಮ ಚಿಂಚೋಳಿ ತಾಲೂಕಿನ ಬೆಡಸೂರು ತಾಂಡಾದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಚಿಂಚೋಳಿ ಕ್ಷೇತ್ರ ಬೀದರ್ ಲೋಕಸಭಾ ಕ್ಷೇತದ ವ್ಯಾಪ್ತಿಗೆ ಬರುವುದರಿಂದ ತಮ್ಮ ಪರವಾಗಿ ಮತ ಹಾಕಿಕೊಳ್ಳುವ ಅವಕಾಶ ಜಾಧವ್ ಅವರಿಗೆ ಇಲ್ಲದಂತಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಕುಟುಂಬ ಸಮೇತ ಸರದಿ ಸಾಲಿನಲ್ಲಿ ನಿಂತು ಮತಗಟ್ಟೆ ಸಂಖ್ಯೆ 109 ರಲ್ಲಿ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಶಾರದಾ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು. ವಿನಯ ಕುಲಕರ್ಣಿಗೆ ಪತ್ನಿ ಶಿವಲೀಲಾ ಕುಲಕರ್ಣಿ, ಮಕ್ಕಳಾದ ವೈಶಾಲಿ, ದೀಪಾ ಸಾಥ್ ನೀಡಿದರು.
ಕೊಪ್ಪಳದ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪತ್ನಿ ನಿಂಗಮ್ಮರೊಂದಿಗೆ ಆಗಮಿಸಿ ನಗರದ ಬಸವೇಶ್ವರ ಸರ್ಕಲ್ ಬಳಿಯ ಬೂತ್ ನಂಬರ್ 132 ಸಖಿ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ ಮಾಡಿದರು.
ಕೇಂದ್ರ ಸಚಿವ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಶಿರಸಿಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದ್ದಾರೆ. ಶಿರಸಿಯ ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 67ರಲ್ಲಿ ಹೆಗಡೆ ದಂಪತಿ ಹಕ್ಕು ಚಲಾಯಿಸಿದರು.