ಶಿವಮೊಗ್ಗ : ಸೆಕ್ಷನ್ 307 ಕೇಸ್ನಡಿ ಬಂಧಿತನಾಗಿದ್ದ ರೌಡಿಶೀಟರ್ವೊಬ್ಬನನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋದಾಗ ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ನಗರದಲ್ಲಿ ನಡೆದಿದೆ.
ಡಿಸೆಂಬರ್ 25 ರಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಆಟೋ ಚಾಲಕ ಶಶಿ ಎಂಬುವರ ಮೇಲೆ ಮಂಜುನಾಥ ಅಲಿಯಾಸ್ ವಲಂಗಾ ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಗಾಯಗೊಳಿಸಿದ್ದನು. ತೀವ್ರ ರಕ್ತಸ್ರಾವವಾಗಿ ಗಾಯಗೊಂಡಿರುವ ಶಶಿ ಸದ್ಯಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತನಗೆ ಚಾಕು ಹಾಕಿದವರು ಯಾರು ಎಂದು ಶಶಿ ಪೊಲೀಸರ ಮುಂದೆ ವಲಂಗಾ ಸೇರಿದಂತೆ ಇತರೆ ಮೂವರ ಹೆಸರನ್ನು ಹೇಳಿದ್ದ. ಈ ಮಾಹಿತಿ ಮೇರೆಗೆ ಪೊಲೀಸರು ನಿನ್ನೆ ನಾಲ್ವರನ್ನು ಬಂಧಿಸಿದ್ದರು. ಅದರಂತೆ ಇಂದು 307 ಪ್ರಕರಣದಡಿ ಚಾಕುವನ್ನು ವಶಪಡಿಸಿಕೊಂಡು ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ವಲಂಗಾ ಪೊಲೀಸ್ ಸಿಬ್ಬಂದಿ ರವಿ ಹಾಗೂ ಇನ್ನೊಬ್ಬರ ಮೇಲೆ ಡ್ರ್ಯಾಗರ್ನಿಂದ ಚುಚ್ಚಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ರವಿಗೆ ಗಾಯವಾಗಿದೆ.
ವಿನೋಬನಗರ ಪೊಲೀಸ್ ಠಾಣೆಯ ಇನ್ಚಾರ್ಜ್ ಪಿಐ ಸಿದ್ದನಗೌಡ ಅವರು ವಲಂಗಾನಿಗೆ ಎಚ್ಚರಿಕೆ ನೀಡಿದರೂ ಆತ ಪರಾರಿಯಾಗಲು ಯತ್ನಿಸಿದಾಗ ಆತನ ಬಲಗಾಲಿಗೆ ಶೂಟ್ ಮಾಡಿದ್ದಾರೆ. ಗಾಯಗೊಂಡ ಸಿಬ್ಬಂದಿ ಹಾಗೂ ವಲಂಗಾನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಲಂಗಾ ರೌಡಿಶೀಟರ್ ಆಗಿದ್ದು, ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪಿಐ ಸಿದ್ದನಗೌಡ ಅವರು ಎಚ್ಚರಿಕೆ ನೀಡಿ, ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ, ಆತ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡೇಟು ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಮಾರಕಾಸ್ತ್ರದಿಂದ ಬೆದರಿಸಿ ಸಾರ್ವಜನಿಕರಿಂದ ಹಣ ವಸೂಲಿ ; ರೌಡಿ ಬಂಧನ