ಶಿವಮೊಗ್ಗ: ನಟೋರಿಯಸ್ ರೌಡಿ, ಲೋಕೇಶ್ ಅಲಿಯಾಸ್ ಮಾರ್ಕೇಟ್ ಲೋಕಿಯ ಮೇಲೆ ಪೊಲೀಸರು ಆತ್ಮ ರಕ್ಷಣೆಯ ಸಲುವಾಗಿ ಗುಂಡು ಹಾರಿಸಿದ್ದಾರೆ ಎಂದು ಎಸ್ಪಿ ಶಾಂತರಾಜು ತಿಳಿಸಿದ್ದಾರೆ.
ಮಾರ್ಕೆಟ್ ಲೋಕಿ 2018 ರಲ್ಲಿ ಮಾರ್ಕೆಟ್ ಗಿರೀಶ್ ಕೊಲೆ ಕೇಸ್ನಲ್ಲಿ ಎ-1 ಆರೋಪಿಯಾಗಿದ್ದ. ಈತನ ಹುಡುಕಾಟಕ್ಕೆ ಪೊಲೀಸ್ ಇಲಾಖೆಯು ತಂಡ ರಚನೆ ಮಾಡಿತ್ತು. ನಿನ್ನೆ ಲೋಕಿಯನ್ನು ತಮಿಳುನಾಡಿಯಿಂದ ಕರೆ ತರಲಾಗಿತ್ತು. ವಿಚಾರಣೆಗೆಂದು ಅಬ್ಬಲಗೆರೆ ಗ್ರಾಮದ ಹೊರವಲಯಕ್ಕೆ ಹೋದಾಗ ಪೊಲೀಸರಿಂದ ತಪ್ಪಿಸಿ ಕೊಳ್ಳಲು ಹೆಡ್ ಕಾನ್ಸಟೇಬಲ್ ಕಿರಣ್ ಮೊರೆರವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದಾಗ ಆತ್ಮ ರಕ್ಷಣೆ ಮಾಡಿ ಕೊಳ್ಳಲು ಶಿವಮೊಗ್ಗ ಡಿವೈಎಸ್ಪಿ ಉಮೇಶ್ ನಾಯಕ್ ರವರು ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಿ, ನಂತ್ರ ಲೋಕಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಫೈರಿಂಗ್ ಆದ ತಕ್ಷಣ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ಜೊತೆಗೆ ಪೇದೆ ಕಿರಣ್ ಮೊರೆಯನ್ನು ಸಹ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಕಿರಣ್ ಮೊರೆಯವರನ್ನು ಹೆಚ್ಚಿನ ಚಿಕಿತ್ಸೆಗೆ ಮ್ಯಾಕ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಎಸ್ಪಿ ಶಾಂತರಾಜು ತಿಳಿಸಿದ್ದಾರೆ.
ಮಾರ್ಕೆಟ್ ಲೋಕಿ ಹಿನ್ನೆಲೆ: ಈತನ ಎರಡನೇ ಅಣ್ಣ ತುಳಸಿರಾಮನನ್ನು ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜ ಕೊಲೆ ಮಾಡುತ್ತಾನೆ. ತನ್ನ ಅಣ್ಣನ ಕೊಲೆ ಕೇಸ್ ನಲ್ಲಿದ್ದವರನ್ನು ಕೊಲೆ ಮಾಡುವುದಾಗಿ ಶಪತ ಮಾಡಿದ ಈತ ತುಳಸಿರಾಮನ ಕೊಲೆ ಕೇಸ್ ನಲ್ಲಿ ಎ-1 ಆಗಿದ್ದ ಮಂಜನನ್ನು ಶಿವಮೊಗ್ಗದ ಹೊಸಮನೆ ಬಡಾವಣೆಯ ಜಲದುರ್ಗಮ್ಮ ದೇವಾಲಯದಲ್ಲಿ ಕೊಲೆ ಮಾಡುತ್ತಾನೆ. ನಂತ್ರ ಎ-2 ವೆಂಕಟೇಶ ಅಲಿಯಾಸ್ ಮೊಟಿ ವೆಂಕನನ್ನು ಹೊಸಮನೆಯ ಆತನ ಅಂಗಡಿಯಿಂದ ಓಡಿಸಿ ಕೊಂಡು ಬಂದು ಸುಬ್ಬಯ್ಯ ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಕೊಲೆ ಮಾಡುತ್ತಾನೆ. ಎ-3 ಮಾರ್ಕೆಟ್ ಗಿರಿಯನ್ನು 2018 ರಲ್ಲಿ ಸೂರ್ಯ ಕಂಫರ್ಟ್ಸ್ ಬಳಿ ಕಾರಿನಲ್ಲಿ ಕುಳಿತು ಕೊಂಡಾಗ ಕೊಲೆ ಮಾಡಿ ಪರಾರಿಯಾಗಿರುತ್ತಾನೆ.
ಈತನ ವಿರುದ್ದ ಹಫ್ತಾ ವಸೂಲಿ, ಬೆದರಿಕೆಯ ಪ್ರಕರಣಗಳು ದಾಖಲಾಗುತ್ತವೆ. ಈತನನ್ನು ಹಿಡಿಯಲು ಶಿವಮೊಗ್ಗ ಡಿವೈಎಸ್ಪಿ ಉಮೇಶ್ ನಾಯಕ್ ರವರ ನೇತೃತ್ವದಲ್ಲಿ ದೊಡ್ಡಪೇಟೆ ಸರ್ಕಲ್ ಇನ್ಸ್ಪೆಕ್ಟರ್ ವಸಂತ್ ಕುಮಾರ್ ಹಾಗೂ ಮಹಿಳಾ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಅಭಯ್ ಸೋಮನಾಳ್ ರವರ ತಂಡವನ್ನು ರಚಿಸಿದ್ದರು.