ಶಿವಮೊಗ್ಗ: ತಾಲೂಕಿನ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಪೊಲೀಸರು ದಾಳಿ ಮಾಡಿ, ಪರಿಶೀಲನೆ ನಡೆಸಿದರು. ಶಿವಮೊಗ್ಗ ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ಕಾರಾಗೃಹ ಮೇಲೆ ಶೋಧ ಕಾರ್ಯ ನಡೆದಿದೆ. ಗಾಂಜಾ ಸೇವನೆ ಸೇರಿದಂತೆ ಮೊಬೈಲ್ ಬಳಕೆ ಇತರೆ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ತುಂಗಾ ನಗರದ 30 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಶ್ವಾನದಳ, ಎಎಸ್ಸಿ ತಂಡ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.
ಕೋರ್ಟ್ ಅನುಮತಿ ಪಡೆದು ದಾಳಿ: ಕಾರಾಗೃಹದ ಮೇಲೆ ದಾಳಿ ನಡೆಸಬೇಕಾದರೆ ಜಿಲ್ಲಾ ನ್ಯಾಯಾಲಯದ ಅನುಮತಿಯನ್ನು ಪೊಲೀಸ್ ಇಲಾಖೆ ಕಡ್ಡಾಯವಾಗಿ ಪಡೆಯಬೇಕು. ಕಾರಾಗೃಹದ ಮೇಲೆ ಯಾವ ಉದ್ದೇಶಕ್ಕೆ ದಾಳಿ ನಡೆಸುತ್ತಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಹೀಗಾಗಿ ಪೊಲೀಸರು ಕೋರ್ಟ್ ಅನುಮತಿ ಪಡೆದು ಪ್ರತಿ ಎರಡು ತಿಂಗಳಿಗೊಮ್ಮೆ ದಾಳಿ ಮಾಡಿ ಪರಿಶೀಲಿಸುತ್ತಾರೆ.
ಮನೆ ದರೋಡೆ ಮಾಡಿದ್ದ ಮೂವರು ಸೆರೆ: ಮುಖಕ್ಕೆ ಮಾಸ್ಕ್ ಧರಿಸಿ ಮನೆಗೆ ನುಗ್ಗಿ ಮನೆಯವರನ್ನು ಬೆದರಿಸಿ 35 ಗ್ರಾಂ ಚಿನ್ನ, 30 ಸಾವಿರ ರೂ ಹಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರೀತನ್, ರಜತ್ ಹಾಗೂ ವಿಜಯ್ ಬಂಧಿತ ಆರೋಪಿಗಳು. ಮೇ 25ರಂದು ರಾತ್ರಿ ಕಾಮಾಕ್ಷಿಪಾಳ್ಯದ ಸಣ್ಣಕ್ಕಿಬೈಲ್‌ನಲ್ಲಿರುವ ಆಟೋ ಚಾಲಕ ನಾಗೇಶ್ ಮನೆ ಬಳಿ ಮಾಸ್ಕ್ ಧರಿಸಿ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಆರೋಪಿಗಳು ಮನೆ ಬಾಗಿಲು ಬಡಿದಿದ್ದಾರೆ. ಮನೆಯವರು ಬಾಗಿಲು ತೆಗೆಯುತ್ತಿದ್ದಂತೆ ಒಳನುಗ್ಗಿ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಆ ಬಳಿಕ ಮನೆಯಲ್ಲಿದ್ದ 35 ಗ್ರಾಂ ಚಿನ್ನ, 30 ಸಾವಿರ ಹಣ ದೋಚಿ ಪರಾರಿಯಾಗಿದ್ದರು.
ಘಟನೆಯ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಗೇಶ್ ಪರಿಚಿತರೇ ಆಗಿರುವ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೆಯಲ್ಲಿ ಚಿನ್ನಾಭರಣ ಹಣ ಇರುವುದನ್ನು ತಿಳಿದುಕೊಂಡು ಆರೋಪಿಗಳು ಕೃತ್ಯ ಎಸಗಿದ್ದು, ಕೃತ್ಯಕ್ಕೆ ಸಹಾಯ ಮಾಡಿದ್ದ ಇನ್ನೂ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಫ್ಲೈಓವರ್ ಮೇಲಿಂದ ಬಿದ್ದು ವ್ಯಕ್ತಿ ಸಾವು ಶಂಕೆ: ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ
ಪೊಲೀಸರ ಮೇಲೆ ಹಲ್ಲೆ, ಇಬ್ಬರ ಬಂಧನ: ಕುಡಿದ ಮತ್ತಿನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಸಂಬಂಧ ಇಬ್ಬರು ಆರೋಪಿಗಳನ್ನು ಕಲಬುರಗಿಯಲ್ಲಿ ಬಂಧಿಸಲಾಗಿತ್ತು. ಮಲ್ಲಿಕಾರ್ಜುನ ಹಾಗೂ ವಿಜಯ ಬಂಧಿತ ಆರೋಪಿಗಳು. ನಗರದ ಸ್ಟೇಷನ್ ಬಜಾರ್ ಠಾಣೆಯ ಕಾನ್ಸ್ಟೇಬಲ್ ಶಾಂತಲಿಂಗ ಮತ್ತು ದೇವೆಂದ್ರ ಎಂಬುವವರು ರಾತ್ರಿ ಬೀಟ್ ನಡೆಸುತ್ತಿದ್ದಾಗ ಇಲ್ಲಿನ ರಾಮಮಂದಿರ ಹತ್ತಿರದ ಯರಗೋಳ ಕಲ್ಯಾಣ ಮಂಟಪ ಪಕ್ಕದ ಕಟ್ಟಡವೊಂದರಲ್ಲಿ ಕುಡಿದು ಕಿರುಚಾಡುವ ಶಬ್ದ ಕೇಳಿಸಿತ್ತು. ಇಬ್ಬರು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಹೋಗಿ ವಿಚಾರಿಸಿದ್ದರು. ಆಗ ಕಂಠ ಪೂರ್ತಿ ಕುಡಿದು ನಶೆಯಲ್ಲಿದ್ದ ಮಲ್ಲಿಕಾರ್ಜುನ ಮತ್ತು ವಿಜಯ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ ಕಾನ್ಸ್ಟೇಬಲ್ ಶಾಂತಲಿಂಗ ಅವರ ಶರ್ಟ್ ಹಿಡಿದು ಹಲ್ಲೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.