ಶಿವಮೊಗ್ಗ: ಪೊಲೀಸರಿಂದ ಬಂಧನಕ್ಕೊಳಗಾದ ಶಂಕಿತ ಉಗ್ರ ಸೈಯದ್ ಯಾಸೀನ್ ಎಂಬಾತ ತಾನು ಬಾಂಬ್ ತಯಾರಿಸಿ ಅದನ್ನು ಟ್ರಯಲ್ ಬ್ಲಾಸ್ಟ್ ಮಾಡಲು ತುಂಗಾ ನದಿ ದಡವನ್ನು ಬಳಸಿಕೊಳ್ಳುತ್ತಿದ್ದೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಈತ ತನ್ನ ಕೃತ್ಯಕ್ಕೆ ಬಳಕೆಯಾದ ಸ್ಥಳಗಳ ಬಗ್ಗೆ ವಿವರಿಸಿದ್ದು, ನಗರದ ಹಳೆ ಗುರುಪುರ ಬಡಾವಣೆ ಹಿಂಭಾಗದಲ್ಲಿ ಹರಿಯುವ ತುಂಗಾ ನದಿ ದಂಡೆಯ ಮೇಲೆ ಪ್ರಾಯೋಗಿಕ ಸ್ಫೋಟ ನಡೆಸಿರುವುದಾಗಿ ಹೇಳಿದ್ದಾನಂತೆ. ಹೀಗಾಗಿ ಈತನನ್ನು ನಿನ್ನೆ ಮಧ್ಯಾಹ್ನ ಹಾಗೂ ರಾತ್ರಿ ನದಿ ದಡಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದೆ. ದಾವಣಗೆರೆಯಿಂದ ವಿಧಿ ವಿಜ್ಞಾನ ಸಂಚಾರಿ ಪ್ರಯೋಗಾಲಯ ತಂಡ ಬಂದು ಮಹಜರು ನಡೆಸಿದೆ.
ಯಾಸೀನ್ ಹಾಗೂ ಆತನ ಸಹಚರರು ಯೂಟ್ಯೂಬ್ ನೋಡಿಕೊಂಡು ಬಾಂಬ್ ತಯಾರಿಕೆ ಹಾಗೂ ಸ್ಪೋಟಗೊಳಿಸುವ ಬಗ್ಗೆ ಕಲಿತಿದ್ದರು ಎಂಬ ವಿಚಾರವೂ ಗೊತ್ತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ, "ಜಿಲ್ಲೆಯ ಮೂವರು ಯುವಕರು ಐಸಿಸ್ ಎಂಬ ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವುದು ದಿಗ್ಬ್ರಮೆ ಉಂಟು ಮಾಡಿದೆ. ಇಂತಹ ದೇಶದ್ರೋಹಿ ಕೆಲಸ ಮಾಡುವ ಕೆಲ ಯುವಕರ ಬಗ್ಗೆ ಎಚ್ಚರಿಕೆ ಅಗತ್ಯ" ಎಂದು ಹೇಳಿದರು.
ಇದನ್ನೂ ಓದಿ: ಶಂಕಿತ ಉಗ್ರ ಸೈಯ್ಯದ್ ಯಾಸೀನ್ನೊಂದಿಗೆ ವಿವಿಧ ಸ್ಥಳಗಳ ಮಹಜರು ನಡೆಸಿದ ಪೊಲೀಸರು