ಶಿವಮೊಗ್ಗ: ಭದ್ರಾವತಿಯ VISP ಕಾರ್ಖಾನೆಯ ಗುತ್ತಿಗೆ ಕಾರ್ಮಿಕ ಸಂಘದ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಕಾರ್ಮಿಕರ ಸಂಘದವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಗುತ್ತಿಗೆ ಕಾರ್ಮಿಕರು VISP ಕಾರ್ಖಾನೆ ಉಳಿಸಬೇಕೆಂದು ಆಗ್ರಹಿಸಿ ಕಾರ್ಯಕ್ರಮಕ್ಕೆ ಬಂದು ಮುತ್ತಿಗೆ ಹಾಕುವುದಾಗಿ ತಿಳಿಸಿದ್ದರು. ಇದರಿಂದ ಜಿಲ್ಲಾ ಪೊಲೀಸರು ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುರೇಶ್, ಕಾರ್ಯದರ್ಶಿ ರಾಕೇಶ್ ಸೇರಿದಂತೆ ಇತರರನ್ನು ಅವರ ಮನೆಯಲ್ಲಿಯೇ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಅವರನ್ನು ಭದ್ರಾವತಿಯಿಂದ ಹೊಳೆಹೂನ್ನೂರು ಕಡೆ ಕರೆದುಕೊಂಡು ಹೋಗಿದ್ದಾರೆ. ಗುತ್ತಿಗೆ ಕಾರ್ಮಿಕರು ಇಂದು ಭದ್ರಾವತಿಯ ಕಾರ್ಖಾನೆಯಿಂದ ವಿಮಾನ ನಿಲ್ದಾಣದ ತನಕ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಿದ್ದರು . ಇದಕ್ಕಾಗಿ ಮುಂಜಾಗ್ರತ ಕ್ರಮವಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು: ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನವಕರ್ನಾಟಕ ವೇದಿಕೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಕೈಗೊಂಡಿದ್ದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದಿಂದ ವಿಮಾನ ನಿಲ್ದಾಣದವರೆಗೆ ಪಾದಯಾತ್ರೆ ಹೊರಟ ನವಕರ್ನಾಟಕ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ನಗರದ ಕೋರ್ಟ್ ಸರ್ಕಲ್ನಲ್ಲಿ ವಶಕ್ಕೆ ಪಡೆದಿದ್ದಾರೆ. ಇಂದು ಪ್ರಧಾನಿಗಳಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಆಗುತ್ತಿದೆ. ಆದರೆ, ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ ಹಾಗಾಗಿ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಓದಿ: 102 ವರ್ಷಗಳ ಹಳೆಯ ಭದ್ರಾವತಿ ಕಬ್ಬಿಣ, ಉಕ್ಕಿನ ಕಾರ್ಖಾನೆ ಮುಚ್ಚಲು ತೀರ್ಮಾನ: ಕೇಂದ್ರದ ಹೇಳಿಕೆ.. ಕಾಂಗ್ರೆಸ್ ಟೀಕೆ
ವಿಐಎಸ್ಪಿ ಉಳಿವಿಗಾಗಿ ಪ್ರತಿಭಟನೆ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯನ್ನು ಭಾರತೀಯ ಉಕ್ಕು ಪ್ರಾಧಿಕಾರ ಮುಚ್ಚುವ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕಾರ್ಖಾನೆ ಉಳಿಸಬೇಕು ಎಂದು ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು ಕಳೆದ 40 ದಿನಗಳಿಂದ ಭದ್ರಾವತಿಯ ವಿಐಎಸ್ಪಿ ಕಾರ್ಖಾನೆಯ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದಾರೆ.
ವಿಶ್ವನಾಥ್ ಗಂಭೀರ ಆರೋಪ: ಭದ್ರಾವತಿಯ ವಿಐಎಸ್ ಪಿ (ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ) ಕಾರ್ಖಾನೆಯನ್ನು ಜಿಂದಾಲ್ಗೆ ಪರಭಾರೆ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ವಿಐಎಸ್ಪಿ ಕಾರ್ಖಾನೆಯನ್ನು ಜಿಂದಾಲ್ಗೆ ನೀಡುವ ಮಾತುಕತೆ ನಡೆಯುತ್ತಿದೆ. ಜಿಂದಾಲ್ ಬಗ್ಗೆ ಇವರಿಗೆ ಸಾಕಷ್ಟು ಪ್ರೀತಿ ಇದೆ ಎಂದು ಕಿಡಿಕಾರಿದ್ದರು.
ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ತೀರ್ಮಾನ: 102 ವರ್ಷದ ಹಳೆಯ ಕಾರ್ಖಾನೆಯಾದ ಶಿವಮೊಗ್ಗದ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್ಪಿ) ಯನ್ನು ಮುಚ್ಚಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಹಿಂದೆ ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹಣಕಾಸು ಇಲಾಖೆ ರಾಜ್ಯ ಸಚಿವ ಭಾಗವತ್ ಕರದ್, ತೀರಾ ಹಳೆಯದಾದ ಕಾರ್ಖಾನೆಯ ಪುನರುಜ್ಜೀವನಕ್ಕೆ ಹಲವಾರು ಪ್ರಯತ್ನಗಳ ಹೊರತಾಗಿಯೂ ಫಲ ನೀಡದ ಕಾರಣ ಅದನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದರು.
ನಷ್ಟದಲ್ಲಿರುವ ಕಾರ್ಖಾನೆಯನ್ನು ಸರ್ಕಾರ ಖಾಸಗೀಕರಣಗೊಳಿಸಲು ಯೋಜಿಸಿತ್ತು. ಅದರಂತೆ 2019 ರ ಜುಲೈನಲ್ಲಿ ಕಾರ್ಖಾನೆಯ ಎಲ್ಲ ಪಾಲನ್ನು ಮಾರಾಟ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ, ನಷ್ಟದಲ್ಲಿರುವ ಘಟಕವನ್ನು ಮುನ್ನಡೆಸಲು ಯಾರೂ ಮುಂದೆ ಬರಲಿಲ್ಲ. ಹೀಗಾಗಿ ಘಟಕವನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದ್ದರು. ಹಳೆಯ ಯಂತ್ರೋಪಕರಣಗಳು, ನಿರಂತರ ನಷ್ಟ, ದೀರ್ಘಕಾಲದವರೆಗೆ ಇಲ್ಲಿನ ಯಂತ್ರಗಳು ಸ್ಥಗಿತಗೊಂಡಿರುವ ಕಾರಣ, ಘಟಕ ಅನುತ್ಪಾದಿತವಾಗಿದೆ. ಮುಚ್ಚುವುದೊಂದೇ ಈಗಿರುವ ದಾರಿ ಎಂದು ಸಚಿವರು ಹೇಳಿದ್ದರು. ಅಂದಿನಿಂದ ಇಂದಿನವರೆಗೂ ಕಾರ್ಮಿಕರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ.