ಶಿವಮೊಗ್ಗ: ಸಿಎಂ ಯಡಿಯೂರಪ್ಪ ಅವರಿಗೆ ಕಪ್ಪು ಭಾವುಟವನ್ನು ತೋರಿಸಲು ಯತ್ನಿಸಿದ ಐವರನ್ನು ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಸಿಎಂ ನಗರಕ್ಕೆ ಆಗಮಿಸಿದ್ದಾರೆ. ಈ ವೇಳೆ ಐಬಿಯಲ್ಲಿ ವಿಶ್ರಾಂತಿ ತೆಗೆದುಕೊಂಡು ಹೊರಡುವ ಮುನ್ನ ಸಾಗರ ರಸ್ತೆಯಲ್ಲಿ ಕಾಂಗ್ರೆಸ್ನ ಐವರು ಕಾರ್ಯಕರ್ತರು ಸಿಎಂಗೆ ಕಪ್ಪು ಭಾವುಟ ತೋರಿಸಲು ರಸ್ತೆ ಪಕ್ಕದಲ್ಲಿ ನಿಂತಿದ್ದರು. ಇದನ್ನು ಗಮನಿಸಿದ ಗ್ರಾಮಾಂತರ ಪಿಎಸ್ಐ ಮಂಜಪ್ಪ ಐವರನ್ನು ಮನವೊಲಿಸಲು ಯತ್ನಿಸಿದರು. ಈ ವೇಳೆ ಪೊಲೀಸರ ಮಾತನ್ನು ಲೆಕ್ಕಿಸದೇ ಮುಂದೆ ನುಗ್ಗಿದರು. ಪೊಲೀಸರು ಕಾಂಗ್ರೆಸ್ ಅಲ್ಪ ಸಂಖ್ಯಾಂತರ ಘಟಕದ ಅಧ್ಯಕ್ಷ ಆರಿಫ್ ಸೇರಿದಂತೆ ಐದು ಜನರನ್ನು ಬಂಧಿಸಿದರು.
ನಾವು ಸಿಎಂಗೆ ಮನವಿ ಮಾಡಲು ಬಂದಿದ್ದೇವೆ. ಪೊಲೀಸರು ನಮ್ಮನ್ನು ಬಂಧಿಸುವ ಮೂಲಕ ನಮ್ಮ ಹಕ್ಕನ್ನು ಹತ್ತಿಕ್ಕುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಧಿಕ್ಕಾರ ಎಂದು ಕೂಗುತ್ತಾ ಪೊಲೀಸ್ ವ್ಯಾನ್ನಲ್ಲಿ ಬಂಧಿತರು ಧಿಕ್ಕಾರ ಕೂಗಿದರು. ಐವರನ್ನು ಬಂಧಿಸಿದ ನಂತರ ಸಿಎಂ ಸುಭಿಕ್ಷ ಸಾವಯವ ಕಾರ್ಯಕ್ರಮಕ್ಕೆ ತೆರಳಿದರು.