ಶಿವಮೊಗ್ಗ : ರಾಜ್ಯದ ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತೀರ್ಥಹಳ್ಳಿ ಕ್ಷೇತ್ರದ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸುತ್ತಲೇ, ತಮಗೆ ಓಡಾಡಲು ಉತ್ತಮ ರಸ್ತೆ ನಿರ್ಮಿಸಿ ಕೊಡಿ ಎಂದು ಕೈ ಮುಗಿದು ಪ್ರಾರ್ಥಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಡಿಗೆ ಗ್ರಾಮದ ವಳಗೇರಿ ಸಂಪರ್ಕದ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ನೋಡಿದ್ರೆ ಯಾವುದೋ ಗದ್ದೆಯೊಳಗೆ ಓಡಾಡಿದಂತೆ ಅನ್ನಿಸುತ್ತದೆ.
ರಸ್ತೆಯಲ್ಲಿ ವಾಹನ ಓಡಾಡುವುದಕ್ಕೂ ಆಗುವುದಿಲ್ಲ. ನಡೆದುಕೊಂಡು ಹೋಗುವುದು ಕನಸಿನ ಮಾತು. ಈ ಗ್ರಾಮದಿಂದ ಮಕ್ಕಳು ತೊಂದುರು ಶಾಲೆಗೆ ಬರಬೇಕು ಅಂದ್ರೆ, ಇದೇ ಮಣ್ಣಿನ ರಸ್ತೆಯಲ್ಲಿ ಬರಬೇಕು. ಈ ರಸ್ತೆಯ ಮೂಲಕವೇ ವಳಗೇರಿ ಗ್ರಾಮದ ಜನ ಪ್ರತಿನಿತ್ಯ ಓಡಾಡಬೇಕು.
ಈ ರಸ್ತೆಯಲ್ಲಿ ಓಡಾಡುವಾಗ ಅನೇಕರು ಬಿದ್ದು ಗಾಯಗೊಂಡಿದ್ದಾರೆ. ವಾಹನಗಳು ತೋಟ, ಗದ್ದೆಗೆ ನುಗ್ಗಿವೆ. ದಯವಿಟ್ಟು ಈ ರಸ್ತೆಯನ್ನು ಸರಿಪಡಿಸಿ ಎಂದು ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದರು. ಅವರು ಕೂಡ ಒಪ್ಪಿಗೆ ನೀಡಿದ್ದರು. ಆದರೆ, ಶಾಲೆಗಳು ಆರಂಭವಾಗಿದ್ದರೂ, ರಸ್ತೆ ಸರಿಪಡಿಸಿಲ್ಲ. ಈ ಹಿನ್ನೆಲೆ ರಸ್ತೆ ನಿರ್ಮಿಸಿ ಎಂದು ಮತ್ತೆ ವಿದ್ಯಾರ್ಥಿಗಳು ಅದೇ ಕೆಸರು ರಸ್ತೆಯಲ್ಲಿ ನಿಂತು ಮನವಿ ಮಾಡಿದ್ದಾರೆ.