ಶಿವಮೊಗ್ಗ: ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಸಹಕಾರಿ ಅಧಿನಿಯಮದ ಮೂಲ ಆಶಯಗಳ ಪುನಃಸ್ಥಾಪನೆ ಸೇರಿದಂತೆ ಹಲವು ಕ್ರಿಯಾ ಯೋಜನೆಗಳನ್ನು ಸಿದ್ಧ ಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಅಧ್ಯಕ್ಷ ಬಿ.ಹೆಚ್.ಕೃಷ್ಣರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೃಷ್ಣರೆಡ್ಡಿ, ಸಂಯುಕ್ತ ಸಹಕಾರಿ ಕೇಂದ್ರ ಕಚೇರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ, ಪ್ರಾಂತೀಯ ಕಚೇರಿಗಳಿಗೆ ಸ್ವಂತ ನಿವೇಶನ ಮತ್ತು ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು.
ಸಹಕಾರಿ ಕ್ಷೇತ್ರದ ಬಲವರ್ಧನೆಗಾಗಿ ಪ್ರತಿ ಕಂದಾಯ ವಿಭಾಗಗಳಲ್ಲಿ ವಿಭಾಗ ಉಸ್ತುವಾರಿ ಸಮಿತಿ ರಚನೆ, ಕ್ರೆಡಿಟ್ ಸೌಹಾರ್ದ ಸಹಕಾರಿಗಳಿಗೆ ಬಾಧಿಸುತ್ತಿರುವ ಆದಾಯ ತೆರಿಗೆ ತೊಂದರೆಗಳನ್ನು ಶಾಶ್ವತವಾಗಿ ಪರಿಹರಿಸುವ ಪ್ರಯತ್ನ ಹಾಗೂ ಸಹಕಾರಿಗಳ ಗುಣಾತ್ಮಕ ಮತ್ತು ತಾಂತ್ರಿಕ ಬೆಳವಣಿಗೆ ಯೋಜನೆ ರೂಪಿಸಿ ಡಿಜಿಟಲ್ ಸೌಹಾರ್ದ ಸಹಕಾರಿಯಾಗಿ ಕಾರ್ಯನಿರ್ವಹಿಸುವ ಪ್ರಯತ್ನಿಸುವುದು ಕ್ರಿಯಾ ಯೋಜನೆಯ ಅಂಶಗಳಾಗಿವೆ ಎಂದು ಮಾಹಿತಿ ನೀಡಿದರು.
ಇನ್ನೂ, ರಾಜ್ಯದಲ್ಲಿ 4700 ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ . 1260ಕ್ಕೂ ಹೆಚ್ಚು ಇ-ಸ್ಟಾಂಪಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಬೊಕ್ಕಸಕ್ಕೆ ಪ್ರತಿದಿನ 1.50 ಕೋಟಿಗೂ ಹೆಚ್ಚು ರಾಜಸ್ವವನ್ನು ನೀಡುತ್ತಿವೆ. ಈ ಕ್ಷೇತ್ರದಲ್ಲಿ 50 ಲಕ್ಷಕ್ಕೂ ಹೆಚ್ಚು ಸದಸ್ಯರು ತೊಡಗಿಕೊಂಡಿದ್ದು, 750 ಕೋಟಿ ರೂ.ಗಳ ಪಾಲು ಬಂಡವಾಳ, 15 ಕೋಟಿ ರೂ.ಗಳ ಠೇವಣಿ, ಒಂದು ಸಾವಿರ ಕೋಟಿ ರೂ. ನಿಧಿ, 12,000 ಕೋಟಿ ರೂ ಸಾಲ, 18 ಸಾವಿರ ಕೋಟಿ ರೂ. ದುಡಿಯುವ ಬಂಡವಾಳ, 230 ಕೋಟಿ ರೂ. ಲಾಭದ ಹೆಗ್ಗಳಿಕೆ ಈ ಕ್ಷೇತ್ರದ್ದಾಗಿದೆ ಎಂದರು.