ಶಿವಮೊಗ್ಗ: ಇಲ್ಲಿನ ರಾಗಿಗುಡ್ಡದಲ್ಲಿ ಲಭ್ಯವಿರುವ ಸುಮಾರು 20 ಎಕರೆ ಕಂದಾಯ ಜಮೀನಿನಲ್ಲಿ ಜೈವಿಕ ವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ನಡೆದ ಜೈವಿಕ ವನ ಅಭಿವೃದ್ಧಿ ಕುರಿತ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರದ ಹಸಿರೀಕರಣಕ್ಕಾಗಿ 3.86 ಕೋಟಿ ರೂಪಾಯಿ ಮೀಸಲಿರಿಸಲಾಗಿದ್ದು, ಇದನ್ನು ಬಳಸಿಕೊಂಡು ಜೈವಿಕ ವನ ಅಭಿವೃದ್ಧಿಪಡಿಲು ಉದ್ದೇಶಿಸಲಾಗಿದೆ. ಮಲೆನಾಡಿನಲ್ಲಿ ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಸಸಿಗಳನ್ನು ಬಳಸಿ ವನ ಅಭಿವೃದ್ಧಿಪಡಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಇದರಲ್ಲಿ ಮುಂದಿನ ಐದು ವರ್ಷಗಳ ನಿರ್ವಹಣೆಯೂ ಸೇರಿರಬೇಕು ಎಂದರು.
ಒಟ್ಟು 7 ಸಾವಿರ ಸಸಿಗಳನ್ನು ನೆಡುವ ಗುರಿಯನ್ನು ಹೊಂದಲಾಗಿದೆ. ರಾಗಿಗುಡ್ಡದ 112 ಸರ್ವೆ ನಂಬರಿನಲ್ಲಿ ಒಟ್ಟು 69ಎಕರೆ ಜಮೀನು ಇದೆ. ಇದರಲ್ಲಿ ವಿವಿಧ ಉದ್ದೇಶಗಳಿಗಾಗಿ ಒಟ್ಟು 43 ಎಕರೆ ಈಗಾಗಲೇ ಮಂಜೂರು ಮಾಡಲಾಗಿದೆ. ಇಲ್ಲಿನ 5 ಎಕರೆ ಇಎಸ್‍ಐ ಆಸ್ಪತ್ರೆ, 8 ಎಕರೆ ಪ್ರಾದೇಶಿಕ ವಿಜ್ಞಾನ ಕೇಂದ್ರ, 5 ಎಕರೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸೇರಿದೆ ಎಂದರು.
ಇನ್ನೂ ಕೆಲವು ಪ್ರಸ್ತಾವನೆಗಳನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇಲ್ಲಿ 18 ಎಕರೆ ಲಭ್ಯವಿದ್ದು, ಜೈವಿಕ ಉದ್ಯಾನಕ್ಕೆ ಬಳಸಿಕೊಳ್ಳಬಹುದಾಗಿದೆ. ಇದೇ ರೀತಿ ಉದ್ದೇಶಿತ ವಾಜಪೇಯಿ ಬಡಾವಣೆಯಲ್ಲಿ 10 ಎಕರೆ ಮೀಸಲು ಅರಣ್ಯವಿದ್ದು, ಇಲ್ಲಿಯೂ ಸಸಿಗಳನ್ನು ನೆಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಗಿಗುಡ್ಡದಲ್ಲಿ ಸುಮಾರು 20 ಗುಂಟೆ ಜಮೀನು ಒತ್ತುವರಿ ಮಾಡಿ, 22 ಮನೆಗಳನ್ನು ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ಸೂಚಿಸಿದರು.
ಸ್ಮಾರ್ಟ್ ಸಿಟಿ ಮುಖ್ಯ ಎಂಜಿನಿಯರ್ ಶಿವಕುಮಾರ್ ಕೆ.ಪಿ., ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಇದ್ದರು.