ಶಿವಮೊಗ್ಗ: ತಮ್ಮ ಮಗಳಿಗೆ ಪ್ರವೇಶ ನೀಡಲು ನಿರಾಕರಿಸಿದೆ ಎಂದು ಆರೋಪಿಸಿ ಶಾಲೆಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ನಡೆದಿದೆ. ಗಾಡಿಕೊಪ್ಪದಲ್ಲಿರುವ ಸೇಂಟ್ ಜೋಸೆಫ್ ಅಕ್ಷರಧಾಮ ಶಾಲೆಯಲ್ಲಿ ಎಲ್ಕೆ ಜಿ, ಯುಕೆಜಿ ಓದಿದ ಯೋಗೀಶ್ ಹಾಗೂ ಅರ್ಪಿತ ಅವರ ಪುತ್ರಿಗೆ ಒಂದನೇ ತರಗತಿಗೆ ಪ್ರವೇಶ ನೀಡಲು ಶಾಲೆ ನಿರಾಕರಿಸಿದೆ ಎಂಬ ಆರೋಪ ಕೇಳಿಬಂದಿದೆ.
ಈ ವಿಚಾರವಾಗಿ ಪೋಷಕರು ಶಾಲೆಯ ಪ್ರಿನ್ಸಿಪಾಲ್ರನ್ನು ಭೇಟಿ ಮಾಡಿ, ತಮ್ಮ ಮಗಳಿಗೆ ಒಂದನೇ ತರಗತಿಗೆ ಪ್ರವೇಶ ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಆದರೆ, ಪ್ರಿನ್ಸಿಪಾಲರು ಪ್ರವೇಶ ನೀಡಲು ನಿರಾಕರಿಸಿದ್ದಾರಂತೆ. ನಂತರ ಶಾಲೆಯ ಫಾದರ್ ಸಜನ್ ಆಗಮಿಸಿ ಅರ್ಪಿತ ಅವರಿಗೆ ಏಕವಚನದಲ್ಲಿ ಬೈಯ್ದು ಕಳುಹಿಸಿದ್ದಾರೆ ಎನ್ನಲಾಗ್ತಿದೆ. ಇದರಿಂದ ನೊಂದ ಪೋಷಕರು ತಮ್ಮ ಮಗಳಿಗೆ ಇದೇ ಶಾಲೆಯಲ್ಲಿ ಸೀಟು ನೀಡಿ ಎಂದು ಒತ್ತಾಯಿಸಿದ್ದಾರೆ.
ಅರ್ಪಿತ ಹಾಗೂ ಯೋಗೀಶ್ ಅವರ ದೊಡ್ಡ ಮಗಳು ಇದೇ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆದರೂ ಸಹ ತಮ್ಮ ಮಗಳಿಗೆ ಇಲ್ಲಿ ಸೀಟು ನೀಡದೆ ಇರುವುದಕ್ಕೆ, ಅವರು ಶಾಲೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶಾಲೆಯವರು ನಿಮ್ಮ ಮಗಳಿಗೆ ಒಂದನೇ ತರಗತಿಗೆ ಪ್ರವೇಶ ನೀಡಲಾಗುವುದು ಎಂದು ಪೋನ್ ಮಾಡಿ ತಿಳಿಸಿದ್ದಾರಂತೆ. ನಂತರ ಬೆಟರ್ ಮೆಂಟ್ ಚಾರ್ಜ್ ಕಟ್ಟಬೇಕು ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪಿದ್ರು ಸಹ ನಿಮ್ಮ ಮಗಳಿಗೆ ಪ್ರವೇಶ ನೀಡಲ್ಲ ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ ಎಂದು ವಿದ್ಯಾರ್ಥಿನಿಯ ತಾಯಿ ಅರ್ಪಿತ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಮಸ್ಯೆಗಳ ಆಗರವಾದ ಮೈ.ವಿ.ವಿ : ವಿದ್ಯಾರ್ಥಿನಿಯರಿಗೆ ನಿತ್ಯ ನರಕಯಾತನೆ ಆರೋಪ
ಪ್ರವೇಶ ನಿರಾಕರಿಸಿದ್ದಕ್ಕೆ ಹಿಂದೂಪರ ಸಂಘಟನೆಗಳು ಶಾಲೆಯ ಬಳಿ ಹೋಗಿ ಪೋಷಕರ ಪರವಾಗಿ ವಾದ ಮಾಡಿದರು. ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಅದೇ ಶಾಲೆಯಲ್ಲಿ ಪ್ರವೇಶ ನೀಡಲು ನಿರಾಕರಿಸಿದ್ದಕ್ಕೆ ಹಾಗೂ ಪೋಷಕರಿಗೆ ಗೌರವ ನೀಡಿಲ್ಲವೆಂದು ಆಕ್ರೋಶ ಹೊರಹಾಕಿದರು. ನಂತರ ಪೋಷಕರಿಗೆ ಗದರಿಸಿದ ಫಾದರ್ರನ್ನು ಕರೆಯಿಸಿ, ಪೋಷಕರ ನಡುವೆ ಸಭೆ ನಡೆಸಿ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು. ನಂತರ ಫಾದರ್ ಸಜನ್ ಅವರು ಅರ್ಪಿತ ಹಾಗೂ ಯೋಗೀಶ್ ಅವರ ಪುತ್ರಿಗೆ ಒಂದನೇ ತರಗತಿಗೆ ಪ್ರವೇಶ ನೀಡುವುದಾಗಿ ತಿಳಿಸಿದರು.