ಶಿವಮೊಗ್ಗ: ಸ್ಮಾರ್ಟ್ ಸಿಟಿ ಶಿವಮೊಗ್ಗವನ್ನು ಗ್ರೀನ್ ಸಿಟಿಯನ್ನಾಗಿಸುವ ಸಲುವಾಗಿ ಶಿವಮೊಗ್ಗದ ಶಿವಪ್ಪ ನಾಯಕ ಬ್ಯಾರಿಸ್ ಮಾಲ್ ವತಿಯಿಂದ ಇಂದು ನಗರದಲ್ಲಿ ಮ್ಯಾರಥಾನ್ ಓಟ ನಡೆಸಲಾಯಿತು. ಬಿ.ಹೆಚ್. ರಸ್ತೆಯಲ್ಲಿನ ಮಾಲ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ತುಳಸಿಗೌಡ ಅವರು ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು.
ಈ ಮ್ಯಾರಥಾನ್ ಮಾಲ್ನಿಂದ ಪ್ರಾರಂಭವಾಗಿ ನೆಹರೂ ರಸ್ತೆಯ ಮೂಲಕ ಟಿ.ಎಸ್. ಶೀನಪ್ಪ ಶೆಟ್ಟಿ ವೃತ್ತ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತ, ಕೆಇಬಿ ವೃತ್ತ, ಪ್ಲೈಓವರ್ ವೃತ್ತ, ಶಂಕರ ಮಠ ರಸ್ತೆ ಮೂಲಕ ಬಿ.ಹೆಚ್. ರಸ್ತೆ ತಲುಪಿತು. ಇಲ್ಲಿಂದ ಶಿವಪ್ಪ ನಾಯಕ ವೃತ್ತದ ಮೂಲಕ ಪುನಃ ಮಾಲ್ಗೆ ಮ್ಯಾರಥಾನ್ ತಲುಪಿತು. ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗಿದೆ. ಸ್ಮಾರ್ಟ್ ಸಿಟಿಗೆ ಹಸಿರು ಅತಿ ಅವಶ್ಯಕವಾಗಿದ್ದು, ಈ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಮ್ಯಾರಥಾನ್ ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಮಾತನಾಡಿದ ತುಳಸಿಗೌಡ ಅವರು, 'ನಮ್ಮ ಈ ಪ್ರಪಂಚಕ್ಕೆ ಹಸಿರು ತುಂಬಾ ಅವಶ್ಯಕತೆ ಇದೆ. ಇದರಿಂದ ನಾನು ನಮ್ಮ ನರ್ಸರಿಯಲ್ಲಿ 10-15 ಸಾವಿರ ವಿವಿಧ ಬಗೆಯ ಸಸಿಗಳನ್ನು ತಯಾರು ಮಾಡುತ್ತೇನೆ. ಏನು ಮಾಡಬೇಕೆಂದು ತಿಳಿಯದೆ, ನಾನು ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಡಲು ಆರಂಭಿಸಿದ್ದೆ. ಆ ಜಾಗ ಈಗ ದೊಡ್ಡ ಕಾಡಾಗಿ ಬೆಳೆದು ನಿಂತಿದೆ. ನನ್ನ ಬಳಿ ಕೇಳಿಕೊಂಡು ಬಂದವರಿಗೆ ಸಸಿಗಳನ್ನು ಉಚಿತವಾಗಿ ನೀಡಿ, ಪರಿಸರ ಬೆಳೆಸಲು ಸಣ್ಣದೊಂದು ಕೆಲಸ ಮಾಡುತ್ತಿದ್ದೇನೆ' ಎಂದು ಹೇಳಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಲ್ನ ವ್ಯವಸ್ಥಾಪಕರಾದ ಮೊಹಿನುದ್ದಿನ್, ನಮ್ಮ ಮಾಲ್ ವತಿಯಿಂದ ಆಯೋಜಿಸಿದ್ದ ಮ್ಯಾರಥಾನ್ಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮ್ಯಾರಥಾನ್ ಅನ್ನು ನಾವು ಮೊದಲ ಬಾರಿಗೆ ಆಯೋಜನೆ ಮಾಡಿದ್ದು, ಸಂತಸ ತಂದಿದೆ ಎಂದು ತಿಳಿಸಿದರು. ಮ್ಯಾರಥಾನ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಎಲ್ಲಾ ವಯೋಮಾನದವರು ಭಾಗಿಯಾಗಿದ್ದರು.
ಇದನ್ನೂ ಓದಿ: ಭಗವದ್ಗೀತೆ ಜೀವನದ ಧರ್ಮ ಯೋಗವಾಗಿದೆ: ಅಭಿನವನ ಶಂಕರ ಭಾರತಿ ಸ್ವಾಮೀಜಿ