ಶಿವಮೊಗ್ಗ: ಪಡಿತರ ಅಕ್ಕಿಯನ್ನು ಕಾಳಸಂತೆಗೆ ಮಾರಾಟ ಮಾಡುವುದನ್ನು ಮತ್ತು ಬೋಗಸ್ ಪಡಿತರ ಕಾರ್ಡ್‌ಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಾಗರದ ಸಾಮಾಜಿಕ ಕಾರ್ಯಕರ್ತ ಸ್ವಾಮಿನಾಥ್ ಎಂಬವರು ಪಾದಯಾತ್ರೆ ಕೈಗೊಂಡರು. ಹೊಸಂತೆ ಗ್ರಾಮದಿಂದ ಸಾಗರ ಪಟ್ಟಣದವರೆಗೆ ಸುಮಾರು 20 ಕಿಮೀ ರಾಷ್ಟ್ರಧ್ವಜ ಹಿಡಿದು ಅರೆಬೆತ್ತಲೆಯಾಗಿ ಸಾಗಿ ಬಂದಿರುವ ಇವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ನಮ್ಮ ಮನೆಯಲ್ಲಿ ಪಡಿತರ ಚೀಟಿ ಅವಶ್ಯಕತೆ ಇಲ್ಲದೇ ಇದ್ದರೂ ಪಡಿತರ ಚೀಟಿ ಮಾಡಿಸಿಕೊಂಡು ಪಡಿತರ ಅಕ್ಕಿ ಪಡೆದು ಅದನ್ನು ಮಾರಾಟ ಮಾಡಿದ್ದಾರೆ. ಇಂತಹ ಪಡಿತರ ಚೀಟಿ ರದ್ದು ಮಾಡಬೇಕೆಂದು ತಹಶೀಲ್ದಾರ್ ಮಲ್ಲೇಶ್ ಪೂಜಾರ್ ಅವರಿಗೆ ಮನವಿ ಮಾಡಿ ತಮ್ಮ ಕುಟುಂಬದ ಪಡಿತರ ಚೀಟಿಯನ್ನು ವಾಪಸ್ ನೀಡಿದರು.
ಅಲ್ಲದೇ, ಅನೇಕ ಕಡೆ ಹೀಗೆಯೇ ಪಡಿತರ ಚೀಟಿಯನ್ನು ಪಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಇಂತಹ ಪಡಿತರ ಚೀಟಿಯನ್ನು ಪತ್ತೆ ಮಾಡಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುತ್ತೇವೆ. ಕಾಳಸಂತೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.
ಇದನ್ನೂ ಓದಿ: ಸ್ವಾತಂತ್ರ್ಯ ಸಂಭ್ರಮಕ್ಕೂ ಮುನ್ನ ಶೋಕಗೀತೆ.. ವೀರಪ್ಪನ್ ಮಿಣ್ಯಂ ದಾಳಿಗೆ 30 ವರ್ಷ