ಶಿವಮೊಗ್ಗ: ನಮ್ಮಲ್ಲಿ ಸಂಘಟನೆಯ ಕೊರತೆ ಇದೆ. ಸಾಮಾಜಿಕ ನ್ಯಾಯ ಒದಗಿಸಿಕೊಳ್ಳಬೇಕಾದರೆ ಹೋರಾಟ ಅನಿವಾರ್ಯ. ನಮ್ಮೆಲ್ಲಾ ಸಂಘಟನೆಗಳು ಸೇರಿ, ನಮ್ಮ ಮೀಸಲಾತಿ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದೇವೆ ಹೊರತು, ಯಾರ ವಿರುದ್ಧ ಅಲ್ಲ ಎಂದು ನಿಟ್ಟೂರು ಮಠದ ರೇಣುಕಾನಂದ ಸ್ವಾಮೀಜಿಗಳು ಹೇಳಿದರು. ಈಡಿಗ ಸೇರಿದಂತೆ 26 ಪಂಗಡಗಳಿಂದ ಮೀಸಲಾತಿ ಉಳಿವಿಗಾಗಿ ನಗರದ ಸೈನ್ಸ್ ಮೈದಾನದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಹೋರಾಟಗಾರರ ನಾಡು. ಈ ನಾಡಲ್ಲಿ ಬಡವರ ಶೋಷಿತರ ಪರವಾದ ಹೋರಾಟ ನಡೆಸಿ, ಲಕ್ಷಾಂತರ ಮಂದಿಗೆ ನ್ಯಾಯ ಒದಗಿಸುವ ಕೆಲಸ ಮತ್ತು ಬಡವರ ಕಣ್ಣೀರು ಒರೆಸುವ ಕೆಲಸವನ್ನು ಬಂಗಾರಪ್ಪನವರು ಮಾಡಿದ್ದರು ಎಂದರು.
ನಮ್ಮ ಸಮುದಾಯಕ್ಕೆ ಭೂಮಿ ಕೊಡಿಸಿದವರು ಗಣಪತಿಯಪ್ಪನವರು, ಕಾಗೋಡು ತಿಮ್ಮಪ್ಪ, ಬಂಗಾರಪ್ಪನವರು. ಈಗ ಕಾಯ್ದೆಗಳು ಬದಲಾಗಿ ಎಲ್ಲಾ ಕೈ ಜಾರಿ ಹೋಗುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಉಳಿಸಿಕೊಳ್ಳಬೇಕು ಅಂದರೆ ಹೋರಾಟ ಮಾಡಬೇಕು. ನಾರಾಯಣ ಗುರುಗಳ ಆದರ್ಶವನ್ನು ನಾವು ಉಳಿಸಿ ಬೆಳಸಿಕೊಳ್ಳಬೇಕಿದೆ. ಎಲ್ಲಾ ಸಮಾಜದವರು ಮಠಗಳನ್ನು, ಶಿಕ್ಷಣ ಸಂಸ್ಥೆಗಳನ್ನು ರಚನೆ ಮಾಡಿಕೊಂಡಿದ್ದಾರೆ. ನಾವು ಹೋರಾಟ ಮಾಡದೆ ಇದ್ದರೆ ಯಾರೂ ಕೂಡ ನಮ್ಮ ಮನೆ ಮುಂದೆ ಬರಲ್ಲ, ನಾವೆಲ್ಲಾ ಒಗ್ಗಟ್ಟಾಗಿದ್ದು, ನಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಈಡಿಗ ಹಕ್ಕೊತ್ತಾಯ ಸಮಾವೇಶ ಹಾಗೂ ಸಭೆಗೆ ನನ್ನ ಸಹಮತವಿಲ್ಲ: ಕಾಗೋಡು ತಿಮ್ಮಪ್ಪ
ನಂತರ ಮಾತನಾಡಿದ ಸಾಗರ ಶಾಸಕ ಹರತಾಳು ಹಾಲಪ್ಪ, ಸಂವಿಧಾನ ನಮಗೆ ಹಕ್ಕನ್ನು ನೀಡಿದೆ. ಅದನ್ನು ಕೇಳದೆ ಹೋದರೆ ಯಾರಿಗೂ ಕೊಡಲ್ಲ. ನಾವು ಹಿಂದೆಯೂ ಸಹ ಸಮಾವೇಶ ಮಾಡಿ ಹಕ್ಕೊತ್ತಾಯ ಸಮಾವೇಶ ಕಾರ್ಯಕ್ರಮ ಮಾಡಿದ್ದೆವು. ಈಗ ಹೊಸ ಪೀಳಿಗೆಯವರು ಮಾಡಿದ ಹೋರಾಟಗಳು ಯಶಸ್ವಿಯಾಗಿವೆ. ಮೀಸಲಾತಿಯಿಂದ ನಮಗೆ ಅನಾನೂಕೂಲವಾಗುತ್ತದೆ ಎಂಬ ಅಂಶವನ್ನು ಸಿಎಂ ಹತ್ತಿರ ಚರ್ಚೆ ಮಾಡಿದ್ದೇವೆ. ಹಿಂದುಳಿದ ವರ್ಗದ ಅಧ್ಯಕ್ಷರರ ಜೊತೆ ಸಭೆ ನಡೆಸಿದ್ದೇವೆ. ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಎಂಬ ಅಂಶ ಗಮನಕ್ಕೆ ಬಂದಿದೆ. ಮೀಸಲಾತಿ ವಿಚಾರ ಕೋರ್ಟ್ನಲ್ಲಿದೆ. ರಾಜಕಾರಣಿಗಳ ಮುಂದೆ ಕೈ ಚಾಚದೆ ಹೋರಾಟ ಮುಂದುರೆಸಿ. ನಿಗಮ ಒಂದು ರಚನೆ ಆಗಬೇಕು ಎಂದು ಹೇಳಿದರು.
ಶರಾವತಿ, ಸಾವೆಹಕ್ಲು ಹಕ್ಕು ಪತ್ರದ ಬಗ್ಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಹಿಂದೆ ಅಧಿಕಾರಿಗಳು ಕೊಟ್ಟ ತಪ್ಪು ಮಾಹಿತಿಯಿಂದ ಕಾಗೋಡು ತಿಮ್ಮಪ್ಪನವರು ಹಕ್ಕುಪತ್ರ ನೀಡಿದ್ದಾರೆ. ಮುಂದೆ ಒಂದು ಗುಂಟೆ ಭೂಮಿಯನ್ನು ಬಿಡಿಸಲು ನಾವು ಬಿಡುವುದಿಲ್ಲ. ಹಿಂದೆ ಬಂಗಾರಪ್ಪನವರು ನಮಗೆ ಧ್ವನಿ ನೀಡಿದ್ದರು. ಈಗ ಅದರಿಂದ ನಾವು ಸಮಾವೇಶ ನಡೆಸಿದ್ದೇವೆ. ಸಂಘಟನೆಯನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ಕರೆ ಕೊಟ್ಟರು. ಸಮಾವೇಶದಲ್ಲಿ ಅರುಣಾನಂದ ಸ್ವಾಮೀಜಿ, ಸಿಗಂದೂರು ಧರ್ಮದರ್ಶಿ ರಾಮಪ್ಪ ಸೇರಿದಂತೆ ಜಿಲ್ಲೆಯ ನಾನಾ ಕಡೆಯಿಂದ ಆಗಮಿಸಿದ್ದ ಈಡಿಗ, ಬಿಲ್ಲವ, ನಾಮಧಾರಿ ಸಮಾಜದವರು ಸಮಾವೇಶದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಈಡಿಗ ಹಕ್ಕೊತ್ತಾಯ ಸಮಾವೇಶ ಹಾಗೂ ಸಭೆಗೆ ನನ್ನ ಸಹಮತವಿಲ್ಲ: ಕಾಗೋಡು ತಿಮ್ಮಪ್ಪ