ಶಿವಮೊಗ್ಗ : ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಯನ್ನು ಕೇವಲ ಸಿಮ್ಸ್ ಆಸ್ಪತ್ರೆಯ ಲ್ಯಾಬ್ನಲ್ಲಿ ಮಾತ್ರ ನಡೆಸಲಾಗುತ್ತಿತ್ತು, ಆದರೆ, ಇನ್ನು ಮುಂದೆ ಕೆಎಫ್ಡಿ ವೈರಸ್ ಪರೀಕ್ಷೆಗೆ ನಿರ್ಮಾಣವಾಗಿರುವ ಲ್ಯಾಬ್ನಲ್ಲಿ ಕೂಡ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಬಿ.ಹೆಚ್. ರಸ್ತೆಯ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಪಕ್ಕದಲ್ಲಿರುವ ಲ್ಯಾಬ್ನಲ್ಲಿ ಮಂಗನ ಕಾಯಿಲೆ ವೈರಾಣು ಪರೀಕ್ಷೆ ನಡೆಸಲಾಗುತ್ತಿತ್ತು. ಇದೀಗ ಈ ಲ್ಯಾಬ್ನಲ್ಲಿ ಕೊರೊನಾ ಪರೀಕ್ಷೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಇದರಿಂದ ಸಿಮ್ಸ್ನ ಲ್ಯಾಬ್ ಮೇಲಿದ್ದ ಭಾರ ಕೊಂಚ ಕಡಿಮೆಯಾಗಲಿದೆ. ಸಿಮ್ಸ್ ಲ್ಯಾಬ್ನಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಜನರ ಕೊವಿಡ್ -19 ಪರೀಕ್ಷೆ ನಡೆಸಲಾಗುತ್ತಿತ್ತು.
ಇದೀಗ ಇನ್ನೊಂದು ಲ್ಯಾಬ್ ದೊರಕಿರುವುದರಿಂದ ಬೇಗ ಫಲಿತಾಂಶ ಬರಲು ಅನುಕೂಲಕರವಾಗಲಿದೆ.
ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ :
ಭದ್ರಾವತಿಯ 35 ವರ್ಷದ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇವರು ದೆಹಲಿಯಿಂದ ವಾಪಸ್ ಆಗಿ ಭದ್ರಾವತಿಯ ಲಾಡ್ಜ್ನಲ್ಲಿ ವಾಸವಾಗಿದ್ದರು. ಮೇ 14 ರಂದು ದೆಹಲಿಯಿಂದ ಶ್ರಮಿಕ್ ರೈಲಿನ ಮೂಲಕ ಮೇ 17 ಕ್ಕೆ ಹುಬ್ಬಳ್ಳಿಗೆ ಬಂದು, ನಂತರ ಅಲ್ಲಿಂದ ಬಸ್ ಮೂಲಕ ಶಿವಮೊಗ್ಗಕ್ಕೆ ಬಂದಿದ್ದರು.
ಕುಟುಂಬದ ಪ್ರತಿಯೊಬ್ಬರ ಗಂಟಲು ದ್ರವವನ್ನು ಪರೀಕ್ಷೆ ನಡೆಸಲಾಗಿತ್ತು, ಕುಟುಂಬದ ಎಲ್ಲರ ವರದಿ ನೆಗಟಿವ್ ಬಂದಿತ್ತು. ನಂತರ ಇವರನ್ನು ಭದ್ರಾವತಿಯ ಲಾಡ್ಜ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸರ್ಕಾರದ ಹೊಸ ಆದೇಶದಂತೆ ಕ್ವಾರಂಟೈನ್ ಕೇವಲ 7 ದಿನ ಮಾತ್ರ ಎಂದಾಗ, ಎಲ್ಲರನ್ನು ಮನೆಗೆ ಕಳುಹಿಸುವ ಮುನ್ನ ಗಂಟಲದ್ರವ ಪರೀಕ್ಷೆಗೆ ಕಳುಹಿಸಿದಾಗ ಮಹಿಳೆಯಲ್ಲಿ ಪಾಸಿಟಿವ್ ಬಂದಿದೆ.
ಇದೀಗ ಮಹಿಳೆಯನ್ನು ನಗರದ ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ, ಮಹಿಳೆಯ ಜೊತೆಗಿದ್ದವರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಪ್ರತ್ಯೇಕವಾಗಿರಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದರು.