ಶಿವಮೊಗ್ಗ : ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಹಾಗೂ ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ವಿರೋಧಿಸಿ ಎನ್ಎಸ್ಯುಐ ಸಂಘಟನೆ ತಟ್ಟೆ ಬಾರಿಸುವ ಮೂಲಕ ಪ್ರತಿಭಟಿಸಿತು.
ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಎನ್ಎಸ್ಯುಐ ಕಾರ್ಯಕರ್ತರು ತಟ್ಟೆ ಬಾರಿಸುವ ಮೂಲಕ ಕೇಂದ್ರದ ರೈತ ವಿರೋಧಿ ನೀತಿ ಖಂಡಿಸಿದರು. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ, ಭೂ ಒಡೆತನದ ಹಕ್ಕು ನೀಡುವಂತಹ ರೈತರಿಗೆ ಮಾರಕವಾದ ಕಾನೂನುಗಳನ್ನ ಜಾರಿಗೆ ತಂದಿದೆ. ಆ ಮೂಲಕ ರೈತರನ್ನು ಬೀದಿಯಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದೆ.
ಈ ಕಾಯ್ದೆಗಳು ಕಾರ್ಪೊರೇಟ್ ವಲಯಕ್ಕೆ ಅನುಕೂಲವಾಗುವಂತಿವೆ. ಇದರಿಂದ ಆಹಾರ ಪದಾರ್ಥಗಳ ಮೇಲೆ ಕಾರ್ಪೊರೇಟ್ ವಲಯ ಏಕಸ್ವಾಮ್ಯ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಇದರಿಂದ ದೇಶದ ಆಹಾರ ವ್ಯವಸ್ಥೆ ಬುಡಮೇಲಾಗುತ್ತದೆ ಎಂದರು.
ದೇಶಕ್ಕೆ ಮಾರಕವಾದ ಕಾಯ್ದೆಯನ್ನು ಖಂಡಿಸಿ ರೈತರು ಕಳೆದ ಒಂದು ತಿಂಗಳಿನಿಂದ ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸ್ಪಂದಿಸದೆ ರೈತರಿಗೆ ಅವಮಾನ ಮಾಡಿದೆ ಎಂದು ಇಂದು ಜಿಲ್ಲಾ ಎನ್ಎಸ್ಯುಐ ಕಾರ್ಯಕರ್ತರು ತಟ್ಟೆ ಬಾರಿಸಿ ಪ್ರತಿಭಟಿಸಿದರು.
ಓದಿ: ಅಂತಾರಾಷ್ಟ್ರೀಯ ಗುಣಮಟ್ಟದ ವಸ್ತುಗಳನ್ನು ತಯಾರಿಸಿ; ಉದ್ಯಮಿಗಳಿಗೆ ಪ್ರಧಾನಿ ಕರೆ
ಈ ಪ್ರತಿಭಟನೆಯಲ್ಲಿ ರಾಜ್ಯ ಎನ್ಎಸ್ಯುಐ ಉಪಾಧ್ಯಕ್ಷ ಚೇತನ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಮೇಶ್ ಹೆಗ್ಡೆ, ಕಾರ್ಯದರ್ಶಿ ಎನ್.ರಮೇಶ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.