ಶಿವಮೊಗ್ಗ : ವಿಮಾನ ನಿಲ್ದಾಣ ಕಾಮಗಾರಿಗೆ ಸೋಗಾನೆ ಗ್ರಾಮದ ಸರ್ವೆ ನಂ.120ರಲ್ಲಿ ಕೆಐಎಡಿಬಿಗೆ ಸೇರಿದ 4 ಎಕರೆ ಜಮೀನಿನಲ್ಲಿ ಕಟ್ಟಡ ಕಲ್ಲು ತೆಗೆಯಲು ಕಲ್ಲುಗಣಿ ಗುತ್ತಿಗೆ ಮಂಜೂರಾತಿ ಪಡೆಯಲು ಕಂದಾಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ರಷ್ಮಿ ಅವರಿಗೆ ಸೂಚಿಸಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮರಳು ಸಮಿತಿ ಟಾಸ್ಕ್ ಫೋರ್ಸ್ ಹಾಗೂ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಿ ಕಾಮಗಾರಿಗಳಿಗೆ ನಿಗದಿಪಡಿಸಲಾಗಿರುವ ಕ್ವಾರಿಗಳಲ್ಲಿ ನಿರಂತರವಾಗಿ ಮರಳನ್ನು ತೆಗೆಯಲು ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ, ಇಲ್ಲಿನ ಮರಳನ್ನು ಖಾಸಗಿಯವರಿಗೆ ಸರಬರಾಜು ಮಾಡಲು ಅವಕಾಶವಿರುವುದಿಲ್ಲ. ಮಳೆಗಾಲವಾದ್ದರಿಂದ ಸಂಬಂಧಿತ ಇಲಾಖೆಯ ಅನುಮತಿ ಪಡೆಯದೆ ಕ್ವಾರಿಗಳಿಂದ ಮರಳು ಎತ್ತದಿರುವಂತೆ ಹಾಗೂ ಈವರೆಗೆ ಸಂಗ್ರಹಿಸಲಾಗಿರುವ ಮರಳನ್ನು ಸಾಗಿಸಲು ಯಾವುದೇ ಆಕ್ಷೇಪಣೆ ಇರುವುದಿಲ್ಲ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ವತಿಯಿಂದ ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳನ್ನು ಗುರುತಿಸಿ ಮೊಕದ್ದಮೆ ದಾಖಲಿಸುವ ಹಾಗೂ ದಂಡ ವಿಧಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಅಂತೆಯೇ ಜಿಲ್ಲೆಯ ತಹಶೀಲ್ದಾರರು ಅಕ್ರಮ ಜಲ್ಲಿ, ಕಲ್ಲು ಸೇರಿದಂತೆ ಮರಳು ಗಣಿಗಾರಿಕೆ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಿದರು. ಈವರೆಗೆ ಮಾಸಿಕವಾಗಿ ಸಭೆ ನಡೆಸದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ರಷ್ಮಿ ಅವರಿಗೆ ಸೂಚಿಸಿದರು.
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದಲ್ಲಿ ಹೊಸ ಮರಳು ನೀತಿಯನ್ವಯ 30 ಎಕರೆ ಮರಳು ನಿಕ್ಷೇಪವನ್ನು ಗುರುತಿಸಲಾಗಿದ್ದು, ಒಂದು ಹಾಗೂ ಎರಡನೇ ಹಂತದ ಮರಳು ಹರಾಜಿನಲ್ಲಿ ವಿಫಲಗೊಂಡಿರುವ ಹಾಗೂ ಸರ್ಕಾರಿ ಕಾಮಗಾರಿಗಳ ಸಲುವಾಗಿ ಮೀಸಲಿರಿಸುವಂತೆ ಹಾಗೂ ಗುತ್ತಿಗೆ ಜಾರಿಯಾಗದ ಎಲ್ಲಾ ಮರಳು ಬ್ಲಾಕ್‍ಗಳಿಗೆ ಅಧಿಸೂಚನೆ ಜಾರಿಗೊಳಿಸುವ ಪೂರ್ವದಲ್ಲಿ ಅರಣ್ಯ, ಪರಿಸರ ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯುವಂತೆ ರಷ್ಮಿ ಅವರಿಗೆ ಸೂಚಿಸಿದರು.
ಶಿವಮೊಗ್ಗ ತಾಲೂಕು ಸೋಗಾನೆ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯ ಸಲುವಾಗಿ, ಭದ್ರಾವತಿ ತಾಲೂಕಿನ ಹಾಗಲಮನೆ ಗ್ರಾಮದ ಸರ್ವೆ ನಂ.20 ಮತ್ತು 21ರ 4 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಕಲ್ಲುಪುಡಿ ಮಾಡುವ ಘಟಕ ಸ್ಥಾಪಿಸಲು ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಕಾಯ್ದೆಯಡಿ ವಿಶೇಷ ಪರವಾನಿಗೆ ಕೋರಿರುವ ಅರ್ಜಿಗಳನ್ನು ಅನುಮೋದಿಸಿದರು.