ಶಿವಮೊಗ್ಗ/ಬೆಂಗಳೂರು: ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣಕ್ಕೆ ಪ್ರಮುಖ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ಐಸಿಸ್ ಒಳಸಂಚು ಇರುವುದು ಪತ್ತೆಯಾಗಿದ್ದು, ಈ ಸಂಬಂಧ ರಾಜ್ಯದ 6 ಕಡೆಗಳಲ್ಲಿ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಬೆಂಗಳೂರಿನ ಕೆಲವೆಡೆ ಎನ್ಐಎ ದಾಳಿ ನಡೆದಿದೆ.
ದಾಳಿ ವೇಳೆ ಇಬ್ಬರು ಐಸಿಸ್ ಸಕ್ರಿಯ ಸದಸ್ಯರನ್ನು ಬಂಧಿಸಲಾಗಿದೆ. ಉಡುಪಿಯ ರೇಶಾನ್ ತಾಜೂದ್ದೀನ್ ಶೇಕ್ ಮತ್ತು ಶಿವಮೊಗ್ಗ ಜಿಲ್ಲೆಯ ಹುಝೇರ್ ಪಾರ್ಹನ್ ಬೇಗ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಹಿಂದೆ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬಂಧಿತನಾಗಿದ್ದ ಮಾಜ್ ಮುನೀರ್ ವಿಚಾರಣೆ ವೇಳೆ ಇಬ್ಬರ ಹೆಸರು ಬೆಳಕಿಗೆ ಬಂದಿತ್ತು.
ಆರೋಪಿ ಮಾಜ್ ಮುನೀರ್ಗೆ ರೇಶಾನ್ ತಾಜೂದ್ದೀನ್ ಸಹಪಾಠಿಯಾಗಿದ್ದ. ಇಬ್ಬರು ಆರೋಪಿಗಳು ಐಸಿಸ್ ಹ್ಯಾಂಡ್ಲರ್ಸ್ನಿಂದ ಕ್ರಿಫ್ಟೋ ವ್ಯಾಲೆಟ್ಗೆ ಹಣ ಪಡೆಯುತ್ತಿದ್ದರು. ಅಲ್ಲದೆ, ದೊಡ್ಡಮಟ್ಟದ ದುಷ್ಕೃತ್ಯ ಮತ್ತು ಉಗ್ರ ಚಟುವಟಿಕೆ ನಡೆಸುವವರಿಗೆ ಹಣ ಒದಗಿಸಿದ ಆರೋಪ ಇವರ ಮೇಲಿದೆ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಈ ಇಬ್ಬರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಡಿಜಿಟಲ್ ಡಿವೈಸಸ್ ಮತ್ತು ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಆರೋಪಿಗಳು ದೊಡ್ಡ ದೊಡ್ಡ ಲಿಕ್ಕರ್ ಶಾಪ್, ಗೋಡೌನ್ಗಳು ಹಾಗೂ ಟ್ರಾನ್ಸ್ಫಾರ್ಮರ್ಗಳಿಗೆ ಬೆಂಕಿ ಹಚ್ಚಲು ಟಾರ್ಗೆಟ್ ಮಾಡಿದ್ದರು. ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ದಕ್ಕೆ ಉಂಟು ಮಾಡಲು ಸಂಚು ರೂಪಿಸಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ತಂದೆಯ ಅಂತಿಮ ದರ್ಶನಕ್ಕೆ ಮುನೀರ್: ಶಿವಮೊಗ್ಗ ನಗರದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ಶಂಕಿತ ಉಗ್ರ ಮಾಜ್ ಮುನೀರ್ ಅಹಮ್ಮದ್ ತಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಆಗ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆರೋಪಿಗೆ ಅವಕಾಶ ನೀಡಲಾಗಿತ್ತು. ಮುನೀರ್ ಅಹಮ್ಮದ್ನನ್ನು ಶಿವಮೊಗ್ಗ ಪೊಲೀಸರು ತೀರ್ಥಹಳ್ಳಿಗೆ ಕರೆದೊಯ್ದಿದ್ದರು. ತೀರ್ಥಹಳ್ಳಿಯ ಸೂಪ್ಪುಗುಡ್ಡೆಯಲ್ಲಿನ ಮಾಜ್ ನಿವಾಸಕ್ಕೆ ಕರೆದುಕೊಂಡು ಹೋಗಿ ಅಂತಿಮ ದರ್ಶನದ ಬಳಿಕ ವಾಪಸ್ ಕರೆದುಕೊಂಡು ಬಂದಿದ್ದರು.
ಶಂಕಿತ ಉಗ್ರರ ಬಂಧನ ತಂಡದ ಡಿವೈಎಸ್ಪಿ ಶಾಂತವೀರಯ್ಯ ಅವರು ಪೊಲೀಸ್ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದರು. ಆ ದಿನದ ಮಧ್ಯಾಹ್ನ ಮಾಜ್ ತಂದೆಯ ಅಂತಿಮ ಸಂಸ್ಕಾರ ತೀರ್ಥಹಳ್ಳಿಯ ಖಬರಸ್ಥಾನದಲ್ಲಿ ನಡೆದಿತ್ತು. ಅಲ್ಲಿ ಅಂತಿಮ ದರ್ಶನದ ಬಳಿಕ ಮುನೀರ್ನನ್ನು ಪುನಃ ಶಿವಮೊಗ್ಗಕ್ಕೆ ಕರೆದುಕೊಂಡು ಬರಲಾಗಿತ್ತು.
ನದಿ ತೀರದಲ್ಲಿ ಬಾಂಬ್ ಟೆಸ್ಟ್ ಮಾಡಿದ್ದ ಶಂಕಿತರು: ಶಿವಮೊಗ್ಗ ಪ್ರಕರಣದಲ್ಲಿ ಸೈಯದ್ ಯಾಸೀನ್, ಮಾಝ್ ಮುನೀರ್, ಶಾರೀಕ್ ಅಹಮ್ಮದ್ ಎಂಬವರನ್ನು ಬಂಧಿಸಲಾಗಿತ್ತು. ಬಂಧನಕ್ಕೆ ಒಳಗಾಗಿರುವ ಸೈಯದ್ ಯಾಸಿನ್, ಮಾಜ್ ಮುನೀರ್, ಶಾರೀಕ್ ಅಹ್ಮದ್ ಶಿವಮೊಗ್ಗದ ಅಕ್ಷರ ಕಾಲೇಜಿನಲ್ಲಿ ಒಟ್ಟಿಗೆ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದರು. ಬಳಿಕ ಯಾಸಿನ್ ಶಿವಮೊಗ್ಗದಲ್ಲಿ ಎಂಜಿನಿಯರಿಂಗ್ ಓದಿದ್ದರೆ ಮುನೀರ್ ಮಂಗಳೂರಿನ ಮುಡಿಪು ಸಮೀಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದನು. ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು.
ಸೈಯದ್ ಯಾಸಿನ್, ಮಾಜ್ ಮುನೀರ್, ಶಾರೀಕ್ ಅಹ್ಮದ್ ಶಿವಮೊಗ್ಗವನ್ನು ಕೇಂದ್ರ ಸ್ಥಳವನ್ನಾಗಿಸಿಕೊಂಡು ಮಂಗಳೂರು ಸೇರಿದಂತೆ ವಿವಿಧೆಡೆ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಮೂವರೂ ಬಾಂಬ್ ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು. ವಿದೇಶಿ ಉಗ್ರ ಸಂಘಟನೆಯ ಸದಸ್ಯರ ಜೊತೆ ಇವರು ಸಂವಹನ ನಡೆಸುತ್ತಿದ್ದರು ಎಂಬುದರ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದೆ ಎನ್ನಲಾಗುತ್ತಿದೆ.
ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: ಉಳ್ಳಾಲ ಇಂಜಿನಿಯರಿಂಗ್ ಕಾಲೇಜ್ ಮೇಲೆ ಎನ್ಐಎ ದಾಳಿ, ವಿದ್ಯಾರ್ಥಿ ವಶ