ಶಿವಮೊಗ್ಗ : ಹೊಸ ಪಠ್ಯ ಪುಸ್ತಕ ಮುದ್ರಣವಾಗಿದ್ದು, ಅದಷ್ಟು ಬೇಗ ಮಕ್ಕಳಿಗೆ ಪಠ್ಯ ಪುಸ್ತಕವನ್ನು ವಿತರಣೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ಆಗಿದೆ. ಹೊಸ ಪುಸ್ತಕವನ್ನು ಮಕ್ಕಳಿಗೆ ಅದಷ್ಟು ಬೇಗ ವಿತರಣೆ ಮಾಡುತ್ತೇವೆ. ಶಿಕ್ಷಣ ಇಲಾಖೆಯಲ್ಲಿನ ಸುಧಾರಣೆಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಇಲಾಖೆಯನ್ನು ಹಂತಹಂತವಾಗಿ ಸುಧಾರಣೆ ಮಾಡುತ್ತೇವೆ. ರಾಜ್ಯದಲ್ಲಿ ಶಿಕ್ಷಣ ಇಲಾಖೆ ದೊಡ್ಡ ಇಲಾಖೆಯಾಗಿದೆ. ರಾಜ್ಯದಲ್ಲಿ 45,000 ಶಾಲೆ ಕಾಲೇಜುಗಳಿವೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯ ಸಮಸ್ಯೆ ಇದೆ. ಆದಷ್ಟು ಬೇಗ ಶಿಕ್ಷಕರ ನೇಮಕಾತಿ ಜೊತೆಗೆ ಅತಿಥಿ ಶಿಕ್ಷಕರ ನೇಮಕಾತಿಯನ್ನೂ ನಡೆಸುತ್ತೇವೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಮಕ್ಕಳ ಶೂ ಸಾಕ್ಸ್ ಗೆ ಕಡಿಮೆ ಅನುದಾನ ವಿಚಾರ : ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡುತ್ತಿರುವುದು ಒಳ್ಳೆ ರೀತಿಯಲ್ಲಿ ನಡೆಯುತ್ತಿದೆ. ಇದರ ಜೊತೆಗೆ ಮೊಟ್ಟೆ ಕೊಡುವುದನ್ನು ಈಗಾಗಲೇ ನಾವು ಶುರು ಮಾಡಿದ್ದೇವೆ. ಮುಂಬರುವ ಜುಲೈ 7 ರಂದು ಹೊಸ ಸುದ್ದಿಯೊಂದನ್ನು ಕೊಡುತ್ತೇವೆ. ಗಂಡುಮಕ್ಕಳಿಗೆ ಸೈಕಲ್ ಕೊಡಲು ಬಜೆಟ್ ಸೇರಿಸಲು ಚರ್ಚಿಸಿದ್ದೇವೆ. ಹೀಗಿರುವ ಸಂದರ್ಭದಲ್ಲಿ ಎಷ್ಟು ಆಗುತ್ತೊ ಅಷ್ಟು ಈ ಬಗ್ಗೆ ಕ್ರಮ ವಹಿಸಲಿದ್ದೇವೆ. ಈಗಾಗಲೇ ಆರ್ಥಿಕ ವರ್ಷ ಕಳೆದು 4 ತಿಂಗಳಾಗಿದೆ. ಹಾಗಾಗಿ ಮಧ್ಯಂತರವಾಗಿ ಹೇಗೆ ಸೈಕಲ್ ಕೊಡುವುದು ಎಂಬುದನ್ನು ಸಿದ್ದರಾಮಯ್ಯ ಅವರು ಮಾಹಿತಿ ಪಡೆದಿದ್ದಾರೆ ಎಂದು ಮಧು ಬಂಗಾರಪ್ಪ ವಿವರಿಸಿದರು.
ಅತಿಥಿ ಶಿಕ್ಷಕರ ನೇಮಕಾತಿ ವಿಚಾರ : ಅತಿಥಿ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಸಾಮಾನ್ಯವಾಗಿ ಶಿಕ್ಷಕರ ವರ್ಗಾವಣೆ ಜನವರಿ, ಫೆಬ್ರವರಿ ತಿಂಗಳಲ್ಲಿ ಆಗಿಬಿಡುತ್ತದೆ. ನಂತರ ಅತಿಥಿ ಶಿಕ್ಷಕರ ಬಗ್ಗೆ ಒಂದು ಸ್ಪಷ್ಟತೆ ಸಿಗುತ್ತದೆ. ಯಾವ ಭಾಗಕ್ಕೆ ಎಷ್ಟು ಶಿಕ್ಷಕರು ಬೇಕು ಎಂಬುದು ಗೊತ್ತಾಗುತ್ತದೆ. ಇದೀಗ ಕೌನ್ಸೆಲಿಂಗ್ ನಡೆಯುತ್ತಿದೆ. ಶಾಲೆಗಳು ಆರಂಭವಾಗಿವೆ. ಹೊಸ ಸರ್ಕಾರ ಬಂದಿದೆ. ಹೊಸ ನೇಮಕಾತಿ ಜೊತೆಗೆ ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳುತ್ತಿದ್ದೇವೆ. ನ್ಯಾಯಾಲಯ ನೇಮಕಾತಿ ಪ್ರಕ್ರಿಯೆ ಮಾಡಿ. ಆದರೆ ನಾವು ಹೇಳುವವರೆಗೆ ಆದೇಶ ಕೊಡಬೇಡಿ ಎಂದು ಹೇಳಿದೆ. ಈ ಸರಿ ಎಲ್ಲಾ ಒಟ್ಟಿಗೆ ಬಂದಿರುವುದರಿಂದ ಹೀಗಾಗಿದೆ, ಬೇರೇನೂ ಇಲ್ಲ ಎಂದು ಸಚಿವರು ಹೇಳಿದರು.
ಗೀತಾ ಶಿವರಾಜಕುಮಾರ್ ಸ್ಪರ್ಧೆ ಕುರಿತು ಪಕ್ಷ ತೀರ್ಮಾನ ಮಾಡಲಿದೆ : ಈಗ ಗೀತಾ ಶಿವರಾಜಕುಮಾರ್ ಸಕ್ರಿಯ ರಾಜಕಾರಣಕ್ಕೆ ಬಂದಿದ್ದಾರೆ. ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಲು ಹಿರಿಯರು ಸೂಚನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಅವರು ಮುಂದುವರಿಯುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ ಸ್ಪರ್ಧೆ ಮಾಡುವುದರ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ಮುಂದಿನ ಎಲ್ಲ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಗುರಿ ಇದೆ ಎಂದ ಮಧು ಬಂಗಾರ, ಹೊಂದಾಣಿಕೆ ರಾಜಕಾರಣ ವಿಚಾರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಬಿಜೆಪಿ ಮುಖಂಡರ ಆರೋಪಕ್ಕೆ ನಾನು ಉತ್ತರ ಕೊಡಲ್ಲ ಎಂದರು.
ಇದನ್ನೂ ಓದಿ : ಬಿಜೆಪಿ ಅಂದ್ರೆ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ: ಮಧು ಬಂಗಾರಪ್ಪ