ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ನೂತನ ಶಿಲಾಯುಗದ ಶಿಲಾಯುಧವೊಂದು ಪತ್ತೆಯಾಗಿದೆ. ಜಿಲ್ಲಾ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್. ಶೇಜೇಶ್ವರ್ ಕ್ಷೇತ್ರಕಾರ್ಯ ಕೈಗೊಂಡಾಗ ಶಿಲಾಯುಧ ದೊರೆತಿದೆ.
![Stone Discovered in Bhadravati](https://etvbharatimages.akamaized.net/etvbharat/prod-images/kn-smg-02-shelayudha-7204213_30032021174543_3003f_1617106543_419.jpg)
ಭದ್ರಾವತಿ ತಾಲೂಕು ಕಸಬಾ ಹೋಬಳಿಯ ಕಲ್ಲಹಳ್ಳಿ ಗ್ರಾಮದ ವೆಂಕಟೇಶ್ ಅವರ ಸರ್ವೆ ನಂಬರ್ 91 ರ ತೋಟ ಬಸವೇಶನ ಮಟ್ಟಿಯಲ್ಲಿ ಕಾರ್ಯಕ್ಷೇತ್ರ ಕೈಗೊಂಡಾಗ ಶಿಲಾಯುಧ ಸಿಕ್ಕಿದೆ.
ಇದು ಕಪ್ಪು ಡೈಕ್ ಶಿಲೆಯಿಂದ ಆವೃತವಾಗಿದೆ. 17 ಸೆ.ಮೀ ಅಗಲ 6 ಸೆ.ಮೀ ಉದ್ದವಿದೆ. ಇದನ್ನು ಗೆಡ್ಡೆಗೆಣಸು ಅಗೆಯಲು ಹಾಗೂ ಕತ್ತರಿಸಲು ಜನರು ಬಳಸುತ್ತಿದ್ದರು. ಈ ಶಿಲಾಯುಧಕ್ಕೆ ಕಟ್ಟಿಗೆಯನ್ನು ಕಟ್ಟಿ ಕೊಡಲಿಯನ್ನು ಮಾಡಿಕೊಂಡಿರುತ್ತಿದ್ದರು. ಆಯುಧ ಮೊಣಚಾದ ಹಿಡಿ ಹಾಗೂ ಚೂಪಾದ ಕತ್ತರಿಸುವ ಅಂಚು ಹೊಂದಿದೆ. ಇಲ್ಲಿ ಹಿಂದೆ ಸಣ್ಣ ಹಳ್ಳ ಹರಿಯುತ್ತಿದ್ದು, ಈಗ ಮುಚ್ಚಲಾಗಿದೆ. ಶಿಲಾಯುಧ ಕ್ರಿ.ಪೂ 2500 ರಿಂದ ಕ್ರಿ.ಪೂ 1800 ವರ್ಷಗಳಷ್ಟು ಪುರಾತನ ಕಾಲದ್ದು ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ ಸುಮಾರು 27 ನೂತನ ಶಿಲಾಯುಗದ ನೆಲೆಗಳು ಕಂಡು ಬಂದಿದೆ. ಭದ್ರಾವತಿ ತಾಲೂಕಿನಲ್ಲೇ 10 ನೆಲೆಗಳಿವೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳ ಮೊರೆ ಹೋಗುತ್ತಿರುವ ವಿದ್ಯಾರ್ಥಿಗಳು.. ಅಸ್ತಿತ್ವ ಉಳಿಸಿಕೊಳ್ಳಲು ಖಾಸಗಿ ಶಾಲೆಗಳ ಹೆಣಗಾಟ