ಶಿವಮೊಗ್ಗ: ಸಿಎಂ ತವರು ಕ್ಷೇತ್ರದ ಆಶಾ ಕಾರ್ಯಕರ್ತೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ನಿಂದ ಪ್ರಶಂಸೆ ವ್ಯಕ್ತವಾಗಿದೆ. ಶಿವಮೊಗ್ಗದ ತುಂಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅನ್ನಪೂರ್ಣ ಪ್ರಶಂಸೆಗೆ ಒಳಗಾಗಿರುವ ಆಶಾ ಕಾರ್ಯಕರ್ತೆಯಾಗಿದ್ದಾರೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಜವಾಬ್ದಾರಿಯುತ ಕಾರ್ಯನಿರ್ವಹಣೆಗಾಗಿ ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಶಂಸೆ ವ್ಯಕ್ತಪಡಿಸಿದ್ದು, ಈ ವಿಚಾರವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಅನ್ನಪೂರ್ಣ ಅವರು ಕಳೆದ ಮೂರು ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಹಾಗೂ ಮಕ್ಕಳು, ಗರ್ಭಿಣಿ, ಬಾಣಂತಿಯರನ್ನು ಗುರುತಿಸಿ, ಅವರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದು, ತಾಯಿ ಕಾರ್ಡ್ ಮಾಡಿಸುವುದು, ಮನೆ ಮನೆಗೆ ತೆರಳಿ ಕ್ಷಯ ಸೇರಿದಂತೆ ಇತರೆ ಅನಾರೋಗ್ಯ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದಾರೆ.
ಅನ್ನಪೂರ್ಣ ಕಾರ್ಯನಿರ್ವಹಿಸುವ ತುಂಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಇವರ ಆರೋಗ್ಯ ಕೇಂದ್ರದ ಪಕ್ಕದ ಬೀದಿಯನ್ನೇ ಕಂಟೈನ್ಮೆಂಟ್ ಝೋನ್ ಎಂದು ಬಂದ್ ಮಾಡಲಾಯಿತು. ಇಲ್ಲಿ ಇವರು ಆಶಾ ಕಾರ್ಯಕರ್ತೆಯಾಗಿ ಪ್ರತಿ ಮನೆ ಮನೆಗೂ ತೆರಳಿ ಅವರಿಗೆ ಶೀತ, ಕೆಮ್ಮು, ಜ್ವರ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಿಸಿ, ಆರೋಗ್ಯ ಇಲಾಖೆಗೆ ನೀಡಬೇಕಿತ್ತು. ಸಾರ್ವಜನಿಕರು ತೆಗಳಿದರೂ ಕೂಡಾ ತಮ್ಮ ಕಾರ್ಯ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದರು.
ಇದನ್ನೆಲ್ಲಾ ಪರಿಗಣಿಸಿ ಜಿಲ್ಲಾ ಆರೋಗ್ಯ ಇಲಾಖೆಯು ಇವರ ಹೆಸರನ್ನು ರಾಷ್ಟ್ರೀಯ ಆರೋಗ್ಯ ಮಿಷನ್ಗೆ ಕಳುಹಿಸಿಕೊಟ್ಟಿದೆ. ಅನ್ನಪೂರ್ಣ ಅವರ ಸಾಧನೆಯನ್ನು ಪರಿಗಣಿಸಿ ರಾಷ್ಟ್ರೀಯ ಆರೋಗ್ಯ ಮಿಷನ್ ತನ್ನ ಟ್ವಿಟರ್ನಲ್ಲಿ ಇವರ ಭಾವಚಿತ್ರದ ಸಮೇತ ಶ್ಲಾಘನೆ ವ್ಯಕ್ತಪಡಿಸಿದೆ. ಜೊತೆಗೆ ಸಂಸದ ಬಿ.ವೈ.ರಾಘವೇಂದ್ರ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭೀಮಪ್ಪ ಹಾಗೂ ಸ್ಟಾಪ್ ನರ್ಸ್ ಜಯಲಕ್ಷ್ಮೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.