ಶಿವಮೊಗ್ಗ: "ಶಿವಮೊಗ್ಗ ಜಿಲ್ಲೆಯನ್ನು 'ಸೈನ್ಸ್ ಹಬ್' ಮಾಡುವ ದೃಷ್ಟಿಯಿಂದ ಜಿಲ್ಲೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಜಂಟಿ ಅನುದಾನದಲ್ಲಿ ನ್ಯಾಶನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂ ಸ್ಥಾಪಿಸಲಾಗುವುದು" ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, "ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸೈನ್ಸ್ ಮ್ಯೂಸಿಯಂ ಸ್ಥಾಪಿಸಲು ಸರ್ಕಾರ ಮಂಜೂರಾತಿ ನೀಡಿದೆ. ಸುಮಾರು 15.20 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ 6.55 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 8.65 ಕೋಟಿ ರೂ. ಅನುದಾನ ನೀಡಲಿದೆ. ಕೆಟಗರಿಯ ಮಾದರಿಯಲ್ಲಿ ಮ್ಯೂಸಿಯಂ ನಿರ್ಮಿಸುವ ಗುರಿ ಇದೆ" ಎಂದರು.
ಖೇಲೊ ಇಂಡಿಯಾ ಕಾಂಪ್ಲೆಕ್ಸ್: "ಮೊದಲು ಖೇಲೋ ಇಂಡಿಯಾ ಕಾಂಪ್ಲಕ್ಸ್ ಅನ್ನು ಸಹ್ಯಾದ್ರಿ ಕಾಲೇಜಿನಲ್ಲಿ ನಿರ್ಮಾಣ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ, ಸಾಕಷ್ಟು ವಿರೋಧಗಳು ಎದುರಾಗಿದ್ದರಿಂದ ವಿಜ್ಞಾನ ಕ್ಷೇತ್ರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸೈನ್ಸ್ ಮ್ಯೂಸಿಯಂ ಮಂಜೂರು ಮಾಡಿಸಲಾಗಿದೆ. ಈಗ ಖೇಲೊ ಇಂಡಿಯಾ ಕಾಂಪ್ಲೆಕ್ಸ್ ಅನ್ನು ಶಿವಮೊಗ್ಗದ ಕೃಷಿ ಕಾಲೇಜು ಪಕ್ಕದ 20 ಎಕರೆ ಜಾಗದಲ್ಲಿ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಅದೇ ರೀತಿ ಆಯನೂರಿನ ವಿಜ್ಞಾನ ತಾರಾಲಯವನ್ನು ಆದಷ್ಟು ಬೇಗ ದುರಸ್ತಿಗೊಳಿಸಲಾಗುವುದು. ಗ್ರಾಮೀಣ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗುವುದು" ಎಂದು ತಿಳಿಸಿದರು.
ವಿಐಎಸ್ಎಲ್ ಉಳಿಸುವ ಹೋರಾಟ: "ನಾಡಿನ ಪ್ರಸಿದ್ಧ ಕಾರ್ಖಾನೆಗಳಲ್ಲಿ ಒಂದಾದ ವಿಐಎಸ್ಎಲ್ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಈಗಲೂ ಮುಂದುವರೆದಿದೆ. ಇದಕ್ಕಾಗಿ ನಿನ್ನೆ ಸಿಎಂ ಬಸವರಾಜ ಬೊಮ್ಮಯಿ ಅವರ ಜೊತೆ ಸಭೆ ನಡೆಸಲಾಗಿದೆ. ಇದನ್ನೆಲ್ಲಾ ಮುಂದಿನ ಚುನಾವಣಾ ದೃಷ್ಟಿಯಿಂದ ನಾನು ಮಾಡುತ್ತಿಲ್ಲ. ನಮಗೆ ಫೋಟೋ ಸುದ್ದಿ ಆಗಬೇಕೆಂಬ ಹಠವೇನಿಲ್ಲ. ಹಿಂದೆ ದೆಹಲಿಗೆ ಕಾರ್ಖಾನೆ ಉಳಿವಿಗಾಗಿ ನಿಯೋಗವನ್ನು ತೆಗೆದುಕೊಂಡು ಹೋಗಲಾಗಿತ್ತು. ಸದ್ಯ ಕೇಂದ್ರ ಸರ್ಕಾರ ಬಜೆಟ್ ಅಧಿವೇಶನ ನಡೆಯುತ್ತಿದೆ. ರಾಜ್ಯ ಸರ್ಕಾರ ಮುಂದಿನ ಬಜೆಟ್ ತಯಾರಿಯಲ್ಲಿದೆ. ಇವರೆಡು ಮುಗಿದ ನಂತರ ನಿಯೋಗ ತೆಗೆದುಕೊಂಡು ಹೋಗುವ ಪ್ರಯತ್ನ ಮುಂದುವರೆಯುವುದು" ಎಂದು ಹೇಳಿದರು.
"ನಿನ್ನೆ ಶರಾವತಿ ಸಂತ್ರಸ್ತರ ಕುರಿತು ಯಡಿಯೂರಪ್ಪನವರು ಹಾಗೂ ಸಿಎಂ ಬೊಮ್ಮಾಯಿ ಅವರ ಜೊತೆಗೆ ನಡೆದ ಸಭೆಯಲ್ಲಿ ನಾನು, ಜಿಲ್ಲೆಯ ಶಾಸಕರು ಪಾಲ್ಗೊಂಡಿದ್ದರು. ಸಭೆಯಲ್ಲಿ 9 ಎಕರೆಗೂ ಹೆಚ್ಚು ಪ್ರದೇಶಕ್ಕಾಗಿ ಪ್ರಸ್ತಾವನೆ ಮಾಡಲಾಗಿದೆ. ಕೇಂದ್ರದ ಅರಣ್ಯ ಇಲಾಖೆ ಕಳುಹಿಸುವ ವರದಿಯು ವಾಪಸ್ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದರು.
ವಿಮಾನ ನಿಲ್ದಾಣದ ಕೆಲಸಕ್ಕೆ ಅರ್ಜಿ ಕರೆದಿಲ್ಲ: "ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕೆಲಸಕ್ಕೆ ಸದ್ಯ ಯಾವುದೇ ಅರ್ಜಿಯನ್ನು ಕರೆದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣದಲ್ಲಿ ಬೇಕಾದ ಕೆಲಸಗಾರರನ್ನು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದವರು ಆಯ್ಕೆ ಮಾಡಿಕೊಳ್ಳುತ್ತಾರೆ. ಸುಳ್ಳು ಜಾಹೀರಾತು ನೋಡಿ ಯಾರೂ ಮೋಸ ಹೋಗಬಾರದು" ಎಂದು ಸಂಸದರು ಸಲಹೆ ನೀಡಿದರು.
ಟೂರಿಸಂ ರೋಡ್ ಶೋ: "ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಂಡಿಯೋ ಹಾಗೂ ಸ್ಟಾರ್ ಏರ್ ಲೈನ್ನವರು ಮುಂದೆ ಬಂದಿದ್ದು, ಅವರ ಜೊತೆ ಬೆಂಗಳೂರಿನಲ್ಲಿ ಮಾತುಕತೆ ನಡೆಸಲಾಗುತ್ತಿದೆ. ದೇಶದಲ್ಲಿ ಶಿವಮೊಗ್ಗವನ್ನು ಟೂರಿಸಂ ಹಬ್ ಮಾಡುವ ಉದ್ದೇಶದಿಂದ ದೇಶದ ವಿವಿಧ ಕಡೆಯಿಂದ ಟೂರಿಸಂ ಗೈಡ್ಗಳನ್ನು ಕರೆತಂದು ಟೂರಿಸಂ ರೋಡ್ ಶೋ ನಡೆಸುವ ಉದ್ದೇಶವಿದೆ" ಎಂದರು.
"ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ನಿವೇಶನ ನೀಡಲಾಗುವುದು. ನಿಲ್ದಾಣದ ಉದ್ಘಾಟನೆಗೂ ಮುನ್ನವೇ ನಿವೇಶನ ನೀಡಲಾಗುವುದು. ಆದರೆ ರೈತರು ಹೈಕೋರ್ಟ್‌ಗೆ ಹೋದ ಕಾರಣ ನಿವೇಶನ ಹಂಚಿಕೆ ವಿಳಂಬವಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: VISL ಕಾರ್ಖಾನೆ ಉಳಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ: ಬಿ.ವೈ ರಾಘವೇಂದ್ರ