ಶಿವಮೊಗ್ಗ: ರಾಜ್ಯದ ಮಂತ್ರಿ ಮಂಡಲಕ್ಕೆ ಯಾರನ್ನು ತೆಗೆದುಕೊಳ್ಳಬೇಕು, ಯಾರಿಗೆ ಯಾವ ಸ್ಥಾನ ನೀಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಿಎಂ ಯಡಿಯೂರಪ್ಪನವರು ತೀರ್ಮಾನಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಮಂತ್ರಿ ಮಂಡಲದ ವಿಸ್ತರಣೆಯ ಬಗ್ಗೆ ಸಿಎಂ ಯಡಿಯೂರಪ್ಪ ಪರಮಾಧಿಕಾರವನ್ನು ಹೊಂದಿದ್ದಾರೆ. ಬಿಜೆಪಿಯಲ್ಲಿ ಮೂಲ, ವಲಸಿಗ ಎಂಬ ಯಾವುದೇ ಬೇದಭಾವವಿಲ್ಲ. ನಾವೆಲ್ಲಾ ಒಂದೇ ಎಂದು ಎಲ್ಲರು ಕೆಲಸ ಮಾಡಿದ ಪರಿಣಾಮ ಉಪಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಿದ್ದೇವೆ. ಈಗ ಬಂದವರನ್ನು ಪಕ್ಷದ ಕಾರ್ಯಕರ್ತರು ನಮ್ಮವರು ಎಂದು ಸ್ವೀಕಾರ ಮಾಡಿದ್ದಾರೆ. ಅಲ್ಲದೆ ಪಕ್ಷಕ್ಕೆ ಬಂದವರು ತಮ್ಮ ತಾಯಿ ಪಾರ್ಟಿ ಎಂದು ಸ್ವೀಕಾರ ಮಾಡಿ ಬಂದಿದ್ದಾರೆ. ಮಂತ್ರಿ ಮಂಡಲ ಸೇರಲು ಸಾಕಷ್ಟು ಶಾಸಕರು ಇದ್ದಾರೆ. ಯಾರು ಮಂತ್ರಿ ಮಂಡಲಕ್ಕೆ ಸೇರಬೇಕು ಎಂದು ಇನ್ನೂ ಚರ್ಚೆ ನಡೆಸಿಲ್ಲ ಎಂದರು.
ಕಾಂಗ್ರೆಸ್ ವೈಚಾರಿಕ, ಭೌತಿಕ, ಸಂಘಟನಾತ್ಮಕವಾಗಿ ದಿವಾಳಿಯಾಗಿದೆ: ರಾಷ್ಟ್ರೀಯ ಪೌರತ್ವದ ವಿಚಾರದಲ್ಲಿ ಕಾಂಗ್ರೆಸ್ ದೇಶದಲ್ಲಿ ಗಲಭೆ ಸೃಷ್ಟಿ ಮಾಡಿ ರಾಜಕೀಯ ಲಾಭ ಪಡೆಯಲು ಯತ್ನ ಮಾಡುತ್ತಿದೆ. ಕಾಂಗ್ರೆಸ್ ಜೊತೆ ದೇಶದ ನಾಗರಿಕರು ಇಲ್ಲ. ಕಾಂಗ್ರೆಸ್ ಜೊತೆ ಇರುವುದು ಆ ಪಕ್ಷದ ಕಾರ್ಯಕರ್ತರು ಮಾತ್ರ. ಪೌರತ್ವದ ಕಾಯಿದೆಯಿಂದ ದೇಶದ ಯಾವುದೇ ಅಲ್ಪ ಸಂಖ್ಯಾಂತರಿಗೆ ತೊಂದರೆ ಇಲ್ಲ. ಬಾಂಗ್ಲಾ ಹಾಗೂ ಪಾಕಿಸ್ತಾನದಲ್ಲಿ ಅತ್ಯಾಚಾರ, ಅನ್ಯಾಯಕ್ಕೆ ಒಳಗಾಗಿ ಭಾರತಕ್ಕೆ ಬಂದು 40 ವರ್ಷಗಳಿಂದ ಇರುವವರಿಗೆ ಪೌರತ್ವ ಸಿಗಲಿದೆ. ಇಲ್ಲಿ ಕ್ರಿಶ್ಚಿಯನ್, ಪಾರ್ಸಿಗಳನ್ನು ಸ್ವೀಕಾರ ಮಾಡಲಾಗಿದೆ. ಕಾಂಗ್ರೆಸ್ಗೆ ಕಳೆದ ಆರು ವರ್ಷಗಳಿಂದ ಗಲಭೆ ಸೃಷ್ಟಿ ಮಾಡಲು ಒಂದೇ ಒಂದು ವಿಷಯ ಸಿಕ್ಕಿರಲಿಲ್ಲ. ಈಗ ಪೌರತ್ವದ ವಿಷಯ ಇಟ್ಟು ಕೊಂಡು ದೇಶದಲ್ಲಿ ಗಲಭೆ ಸೃಷ್ಟಿಸುವ ಮೂಲಕ ರಾಜಕೀಯ ಲಾಭ ಪಡೆಯಲು ತಂತ್ರಗಾರಿಕೆ ಮಾಡುತ್ತಿದೆ. ಕಾಂಗ್ರೆಸ್ ದೇಶದಲ್ಲಿ ದಿವಾಳಿಯಾಗಿದೆ. ಪೌರತ್ವದ ವಿರುದ್ದ ದೇಶದ ನಾಗರಿಕರು ಕಾಂಗ್ರೆಸ್ ಜೊತೆ ಇಲ್ಲ. ಬದಲಾಗಿ ಅವರ ಕಾರ್ಯಕರ್ತರು ಇದ್ದಾರಷ್ಟೆ, ಈ ಹಿಂದೆ ಕಾಶ್ಮೀರ, ಅಯೋಧ್ಯೆ ವಿಚಾರ ಮುಂದಿಟ್ಟುಕೊಂಡು ಗಲಭೆ ಮಾಡಲು ಯತ್ನ ಮಾಡಿತು. ಇದಕ್ಕೆ ದೇಶದ ಜನತೆ ಬೆಂಬಲ ಕೊಡದೆ ಇರುವುದಕ್ಕೆ ಈಗ ಪೌರತ್ವ ಕಾಯಿದೆಯನ್ನು ಮುಂದಿಟ್ಟುಕೊಂಡು ಹೊರಟಿದೆ ಎಂದು ಹೇಳದರು.