ಶಿವಮೊಗ್ಗ: ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಅಣ್ಣನ ವಿರುದ್ದ ಅಲ್ಲ, ಬದಲಿಗೆ ಒಂದು ಪಕ್ಷದ ಅಭ್ಯರ್ಥಿಯ ವಿರುದ್ದ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ. 56ನೇ ವರ್ಷದ ಹುಟ್ಟುಹಬ್ಬ ಅಚರಣೆಗೂ ಮುನ್ನ ಕಲ್ಲಹಳ್ಳಿಯ ನಿವಾಸದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧೆ ಪಕ್ಷ, ವ್ಯಕ್ತಿಯ ಮೇಲೆ ಆಗುತ್ತದೆಯೇ ಹೊರತು ಅಣ್ಣ-ತಮ್ಮರ ಮೇಲಲ್ಲ ಎಂದರು.
ನಾನು ಅಣ್ಣನ ವಿರುದ್ಧ ಸ್ಪರ್ಧಿಸುವುದು ಸತ್ಯವೇ. ಆದರೆ ನಾನು ಅಣ್ಣನ ವಿರುದ್ಧ ನಿಲ್ಲುತ್ತಿಲ್ಲ. ನಾನು ಒಬ್ಬ ವ್ಯಕ್ತಿಯ ವಿರುದ್ಧ ನಿಲ್ಲುತ್ತಿದ್ದು, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ವ್ಯಕ್ತಿಯ ವಿರುದ್ಧ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.
ಅವರು ಸರ್ಕಾರಿ ಆಸ್ತಿ ಮಾರಲು ಹೊರಟಿದ್ದು, ಶಾಸಕರ ಪಿಎ, ನಿವೃತ್ತ ಸೈನಿಕರಿಗೆ ನೀಡಿದ ಭೂಮಿಯನ್ನು ಹರಾಜು ಮಾಡಿಸಿದ್ದಾರೆ. ಆ ವ್ಯಕ್ತಿ ಕೇಳಿದರೆ ನಷ್ಡವಾಗಿದೆ ಎಂದು ಆತನಿಗೆ ನಾಟ ತೆಗೆದುಕೊಳ್ಳಲು ಹೇಳಿದ್ದಾರೆ. ಹಾಗೆ ಹೇಳಲು ಅವರಪ್ಪನ ಆಸ್ತಿಯೇ? ಎಂದು ಖಾರವಾಗಿ ನುಡಿದರು.
ಈ ಆಕ್ರಮಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತರು ಬಂದು ಹೋದರು. ಇದರ ಬಗ್ಗೆ ನಾವು ಮಾತನಾಡಿದರೆ ರಾಜಕೀಯ ಎನ್ನುತ್ತಾರೆ. ಆದರೆ ಸೂಕ್ತ ತನಿಖೆ ನಡೆಸಿ ಶಿಕ್ಷೆ ಆಗಬೇಕು. ಇದು ಜನರ ತೆರಿಗೆಯಲ್ಲಿ ಕಟ್ಟಿದ ಕಟ್ಟಡ. ಕೋಟ್ಯಂತರ ನಾಟವನ್ನು ತೆಗೆದುಕೊಂಡು ಹೋಗಲು ಹೇಳಿದ ಕುಮಾರ ಬಂಗಾರಪ್ಪನವರನ್ನೇ ಆರೋಪಿ ನಂಬರ್ ಒನ್ ಮಾಡಬೇಕೆಂದರು. ನಮ್ಮ ತಂದೆ ಸಿಬಿಐ ಕೇಸ್ ಗೆದ್ದು ಬಂದ ಹಾಗೆಯೇ ಅವರೂ ಬರಲಿ. ಇಂತಹ ಕಳ್ಳರನ್ನು ಹೊರಗಿಟ್ಟು ರಾಜ್ಯದಲ್ಲಿ ಹಾಗೂ ಸೊರಬದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದರು.
ಸೊರಬದಲ್ಲಿ ಆಡಳಿತ ವ್ಯವಸ್ಥೆ ಸ್ಮಶಾನ ಸೇರಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ವಾತಾವರಣ ಚೆನ್ನಾಗಿದೆ. ಸೊರಬದ ಎಲ್ಲೆಡೆ ನನ್ನ ಬ್ಯಾನರ್ ಕಟ್ಟಿ ಗ್ರಾಮದ ಹಿರಿಯರಿಗೆ ಸನ್ಮಾನವನ್ನು ಗ್ರಾಮಸ್ಥರೇ ನಡೆಸುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಹೀಗೆ ಮಾಡುತ್ತಿದ್ದಾರೆ ಎಂದರು. ನಾವು 120 ಸೀಟು ಗೆಲ್ಲುತ್ತೇವೆ ಅಂತ ಹೇಳಿದ್ರೇ, ಬಿಜೆಪಿಯವರು ಈಗಲೇ ಆಪರೇಷನ್ ಕಮಲ ನಡೆಸಲು ಚೆಕ್ ಬರೆದಿಟ್ಟಿರುತ್ತಾರೆ. ಆದರೆ ನಮ್ಮ ಪಕ್ಷದ ಎಲ್ಲಾ ನಾಯಕರ ನೇತೃತ್ವದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸದಿಂದ ಹೇಳಿದರು.
ರೈತರಿಗೆ ಮೊದಲು ಪರಿಹಾರ ನೀಡಿ: ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರು ಶಿವಮೊಗ್ಗದ ಏರ್ಪೋರ್ಟ್ ಅನ್ನು ಅದಾನಿಗೋ, ಅಂಬಾನಿಗೋ ಮಾರಿ ಹೋಗುತ್ತಾರೆ. ನಿಲ್ದಾಣಕ್ಕೆ ಭೂಮಿ ನೀಡಿದವರಿಗೆ ಪರಿಹಾರ ನೀಡದೇ ವಂಚಿಸಿದ್ದಾರೆ. ಬಿಜೆಪಿಯವರು ಕೊಡುಗೈ ದಾನಿಯಾಗಿ ಸಂಭ್ರಮಿಸಿದ್ದು ಅವರಿಗೆ ಶಾಪವಾಗಿ ಪರಿಣಮಿಸುತ್ತದೆ ಎಂದು ಕಿಡಿಕಾರಿದರು.
ಕಲ್ಬುರ್ಗಿಯಲ್ಲಿ ಲಂಬಾಣಿಯವರಿಗೆ ನೀಡಿದ ಹಕ್ಕು ಪತ್ರದಂತೆ ಶರಾವತಿ ಸಂತ್ರಸ್ತರಿಗೆ ಪ್ರಧಾನಿ ಹಕ್ಕುಪತ್ರ ನೀಡುತ್ತಾರೆ ಎಂಬ ಆಶಯವಿತ್ತು. ಆದರೆ ಈ ಕಾರ್ಯಕ್ಕೆ ಮೋದಿ ಮುಂದಾಗಲಿಲ್ಲ. ಮೋದಿಯವರು ಭಾಷಣ ಮಾಡಿದ್ದು ಶರಾವತಿ ನದಿಯಿಂದ ಬಂದ ವಿದ್ಯುತ್‌ನಿಂದ. ಬಿಜೆಪಿಯವರು ಯಾರೂ ಸಹ ಒಂದು ಡ್ಯಾಂ ಕಟ್ಟಲಿಲ್ಲ. ಈಗ ಶರಾವತಿ ಸಂತ್ರಸ್ತರ ಕಥೆ ಮುಗಿಸಲು ಹೊರಟಿದ್ದಾರೆ ಎಂದರು.
ಬಿಎಸ್ವೈಗೆ ಶುಭಾಶಯ : ಬಿ.ಎಸ್.ಯಡಿಯೂರಪ್ಪನವರ ಹುಟ್ಟುಹಬ್ಬಕ್ಕೆ ಮಧು ಬಂಗಾರಪ್ಪ ಶುಭಾಶಯ ಕೋರಿದರು. ಅವರು ಹುಟ್ಟು ಹೋರಾಟಗಾರರು, ನೂರು ಕಾಲ ಬಾಳಲಿ. ಆದರೆ ಶರಾವತಿ ಸಂತ್ರಸ್ತರನ್ನು ಮರೆತಿದ್ದು ಎಷ್ಟು ಸರಿ. ಹುಟ್ಟುಹಬ್ಬದ ಸಂತೋಷದಲ್ಲಿ ಭಾಗಿಯಾಗುವಂತೆ, ಸಾವಿನ ನೋವಿನಲ್ಲೂ ಭಾಗಿಯಾಗು ಅಂತ ನಮ್ಮ ತಂದೆ ಬಂಗಾರಪ್ಪ ತಿಳಿಸಿದ್ದರು ಎಂದು ನೆನೆದರು.
ಇದನ್ನೂ ಓದಿ : ನಾಳೆಯಿಂದಲೇ ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ: ಬಿ.ಎಸ್. ಯಡಿಯೂರಪ್ಪ