ಶಿವಮೊಗ್ಗ: ಫೆಬ್ರವರಿ 21ರಂದು ಹಿಂದು ಕಾರ್ಯಕರ್ತ ಹರ್ಷನ ಶವದ ಮೆರವಣಿಗೆಯ ವೇಳೆ ನಡೆದ ಗಲಾಟೆಯಲ್ಲಿ ಹಾನಿಗೊಳಗಾಗಿದ್ದ ಕುಟುಂಬಸ್ಥರಿಗೆ ಪರಿಹಾರವನ್ನು ವಿತರಿಸಲಾಯಿತು. ಸುನ್ನಿ ಜಮೀಯಾ ಉಲ್ಮಾ ಕಮಿಟಿಯಿಂದ 7 ಲಕ್ಷ ಮೌಲ್ಯದಷ್ಟು ಪರಿಹಾರವನ್ನು ವಿತರಿಸಲಾಯಿತು. ಹರ್ಷನ ಅಂತಿಮ ಯಾತ್ರಾ ಮೆರವಣಿಗೆ ಸಾಗುವ ಮಾರ್ಗಗಳಾದ ಲಾಲ್ ಬಂದವಾಡಿ, ಆಜಾದ್‌ನಗರ ಸೇರಿದಂತೆ ಇತರೆ ಕಡೆ ಹಲವು ಮನೆಗಳಿಗೆ ಹಾನಿ ಉಂಟಾಗಿತ್ತು.
ಮೆರವಣಿಗೆಯಲ್ಲಿ ಬಂದವರು ಮುಸ್ಲಿಂರ ಮನೆಗಳನ್ನೇ ಟಾರ್ಗೆಟ್ ಮಾಡಿ ಅವರ ಮನೆಯ ಬಾಗಿಲು, ಕಿಟಕಿ, ಮನೆಯ ಮೇಲ್ಛಾವಣಿ ಸೇರಿದಂತೆ ಮನೆ ಮುಂದೆ ನಿಂತಿದ್ದ ಬೈಕ್ಗಳಿಗೆ ಬೆಂಕಿ ಹಚ್ಚಿದ್ದರು. ಇದಲ್ಲದೇ ಘಟನೆಯಲ್ಲಿ 15 ಜನರು ಗಾಯಗೊಂಡಿದ್ದರು.
ಶಿವಮೊಗ್ಗ ಗಾಂಧಿ ಬಜಾರ್ನ ಸುನ್ನಿ ಜಾಮಿಯಾ ಉಲ್ಮಾ ಕಮಿಟಿ ಸದಸ್ಯರು ಹಾನಿಗೊಳಗಾದ ಮನೆಗಳಿಗೆ ತೆರಳಿ, ಹಾನಿಯ ಬಗ್ಗೆ ಪರಿಶೀಲನೆ ನಡೆಸಿ, ಮನೆ ದುರಸ್ತಿ ಹಾಗೂ ಹಾನಿಗೊಳಗಾದ ವಸ್ತುಗಳ ಖರೀದಿಗೆ ಚೆಕ್ ಮೂಲಕ ಪರಿಹಾರ ವಿತರಿಸಲಾಯಿತು. ಹಾನಿಗೊಳಗಾದ ಮುಸ್ಲಿಂ ಕುಟುಂಬಗಳಿಗೆ ಮಾತ್ರವಲ್ಲದೇ ಅಲ್ಲಿನ ಹಿಂದೂ ಕುಟುಂಬಗಳಿಗೂ ಪರಿಹಾರದ ಚೆಕ್ ವಿತರಿಸಿದ್ದಾರೆ.
ಎಲ್ಲರೂ ಸಹಬಾಳ್ವೆಯಿಂದ ಇರಬೇಕು. ಕೆಲವು ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ನಗರವೇ ತತ್ತರಿಸಿ ಹೋಗಿತ್ತು. ಇದರಿಂದ ಹಾನಿಗೊಳಗಾದವರಿಗೆ ಪರಿಹಾರವನ್ನು ನೀಡಿದ್ದೇವೆ ಎಂದು ಕಮಿಟಿ ಮುಖಂಡ ಅಲ್ತಾಫ್ ಪರ್ವಿಜ್ ತಿಳಿಸಿದ್ದಾರೆ.
ಓದಿ: 2ನೇ ಮದುವೆಗೆ ಮುಂದಾದ ಐಎಎಸ್ ಟಾಪರ್ ಟೀನಾ ದಾಬಿ; ವರ ಯಾರು ಗೊತ್ತಾ..?