ಶಿವಮೊಗ್ಗ: ಸಿಎಂ ಬಿಎಸ್‌ವೈ ತವರು ಕ್ಷೇತ್ರ ಶಿಕಾರಿಪುರ ಪುರಸಭೆಯಲ್ಲಿ ಅಧಿಕಾರ ಹಿಡಿಯಬೇಕು ಎಂಬ ಹಠದಿಂದ ಕಾಂಗ್ರೆಸ್‌ನ ಇಬ್ಬರು ಸದಸ್ಯರಿಗೆ ರಾಜೀನಾಮೆ ಕೊಡಿಸಿ, ಆಪರೇಷನ್ ಕಮಲ ನಡೆಸಲಾಗಿದೆ ಎಂದು ಕಾಂಗ್ರೆಸ್ ಪುರಸಭೆ ಸದಸ್ಯ ದರ್ಶನ್ ಉಳ್ಳಿ ಆರೋಪಿಸಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷದ ಹಿಂದೆ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 8 ಹಾಗೂ ಪಕ್ಷೇತರರು 3 ಸ್ಥಾನಗಳನ್ನು ಪಡೆದುಕೊಂಡಿದ್ದರು. ಇದರಿಂದ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಇದರಿಂದ ಕಳೆದ 14 ತಿಂಗಳಿನಿಂದ ಪುರಸಭೆಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನೇ ಪ್ರಕಟ ಮಾಡದೆ ರಾಜಕೀಯ ಮಾಡಿದೆ.
ಕಾಂಗ್ರೆಸ್‌ನಿಂದ ಪುರಸಭೆ ವಾರ್ಡ್ ನಂ 20 ರ ಸದಸ್ಯ ಉಮಾವತಿ ಹಾಗೂ ವಾರ್ಡ್ ನಂ 9ರ ಸದಸ್ಯ ರಮೇಶ್ ರವರು ತಮ್ಮ ಸದಸ್ಯತ್ವಕ್ಕೆ ಮಾರ್ಚ್‌ನಲ್ಲಿಯೇ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ 10 ದಿನಗಳೊಳಗೆ ವಾಪಸ್ ಪಡೆಯದೇ ಇದ್ದರೆ ಅದು ಅಂಗೀಕಾರ ಎಂದು ಪರಿಗಣಿಸಲಾಗುತ್ತದೆ. ಈಗ ಸಾಗರ ಉಪವಿಭಾಗಾಧಿಕಾರಿಗಳಿಂದ ಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಕಡತ ರವಾನೆಯಾಗಿದೆ ಎಂದರು.
ಈ ಕುರಿತು ಜಿಲ್ಲಾಡಳಿತ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಿ ಕೊಟ್ಟಿದೆ. ಈಗ ಚುನಾವಣೆಯನ್ನು ನಡೆಸುವ ಕುರಿತು ಆಯೋಗ ಪ್ರಕಟಣೆ ಹೊರಡಿಸುವುದು ಬಾಕಿ ಇದೆ. ಅಲ್ಲದೆ ಪುರಸಭೆಯಲ್ಲಿ 35 ಅಧಿಕಾರಿಗಳ ಕೊರತೆ ಇದ್ದು, ಇಲ್ಲಿಗೆ ಅಧಿಕಾರಿಗಳನ್ನು ನಿಯೋಜಿಸದೆ, ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ನಿಯೋಜನೆ ಮಾಡಿದರೆ ಜನ ತಮ್ಮ ಮನೆ ಬಳಿ ಬರುವುದಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ನೇಮಕ ಮಾಡುತ್ತಿಲ್ಲ. ಈ ಹಿಂದೆ ಪುರಸಭೆಯಲ್ಲಿ ನಡೆಸಿದ ಭ್ರಷ್ಟಚಾರವನ್ನು ವಿರೋಧಿಸಿ, ಕಾಂಗ್ರೆಸ್‌ಗೆ ಬಹುಮತ ನೀಡಿದರೂ ಸಹ ಬಿಜೆಪಿ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬರಲು ಹುನ್ನಾರ ನಡೆಸುತ್ತಿದೆ ಎಂದು ಪುರಸಭೆ ಸದಸ್ಯ ದರ್ಶನ್ ಉಳ್ಳಿ ದೂರಿದರು.