ಶಿವಮೊಗ್ಗ : ನಾಡಹಬ್ಬ ದಸರಾ ಪ್ರಯುಕ್ತ ಮಹಾನಗರ ಪಾಲಿಕೆ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕೋವಿಡ್ ವೇಳೆ ನಿರಂತರವಾಗಿ ಸೇವೆ ಸಲ್ಲಿಸಿದ್ದ ಆರೋಗ್ಯ ಸಿಬ್ಬಂದಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಕೊರೊನಾ ವಾರಿಯರ್ಸ್ಗಳಾದ ನರ್ಸಿಂಗ್ ಸಿಬ್ಬಂದಿ, ವೈದ್ಯರಿಗೆ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಒಂದು ನಿಮಿಷದಲ್ಲಿ ಹೆಚ್ಚು ಇಡ್ಲಿ ತಿಂದು ಮೈಸೂರು ಮೂಲದ ದೀಪಿಕಾ ಎನ್ನುವ ನರ್ಸಿಂಗ್ ವಿದ್ಯಾರ್ಥಿ ಬಹುಮಾನ ಪಡೆದುಕೊಂಡರು.
ಮಹಿಳೆಯರಿಗಾಗಿ ಬಾಳೆ ಹಣ್ಣು ತಿನ್ನುವ ಸ್ಪರ್ಧೆ : ನಗರದ ಮಹಿಳೆಯರಿಗಾಗಿ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿತ್ತು. ಒಂದು ನಿಮಿಷದಲ್ಲಿ ಹೆಚ್ಚು ಬಾಳೆಹಣ್ಣು ತಿಂದವರನ್ನು ವಿಜೇತರು ಎಂದು ಘೋಷಿಸಿದರು.
ಗಮನ ಸೆಳೆದ ಮಲ್ಲಗಂಬ, ಯೋಗ : ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್ ಹಾಗೂ ಪ್ರಾಣಾಯಾಮ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಇವರ ಆಶ್ರಯದಲ್ಲಿ ಯೋಗ ಹಾಗೂ ಯೋಗ ನಡಿಗೆ,ಚಂಡೆ-ಮದ್ದಳೆ ಹಾಗೂ ಮಲ್ಲಗಂಬ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಯೋಗ ವಿದ್ಯಾರ್ಥಿಗಳಿಂದ ಟ್ರ್ಯಾಕ್ಟರ್ ಮೇಲೆ ನಡೆದ ಮಲ್ಲಗಂಬ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್,ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಸೇರಿದಂತೆ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.