ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯನ್ನು ಕೊಲೆಯಾಗಿ ಪರಿಗಣಿಸದೆ ಇದೊಂದು ಭಯೋತ್ಪಾದಕ ಕೃತ್ಯ ಎಂದು ಪ್ರಕರಣ ದಾಖಲು ಮಾಡಬೇಕು ಎಂದು ಸಂಸದ ಹಾಗೂ ಬಿಜೆಪಿ ಯುವ ಮೊರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಮೃತ ಹರ್ಷ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಸಾವು ಮರುಕಳಿಸದಂತೆ ನೋಡಿಕೊಳ್ಳಬೇಕು. ಹರ್ಷ ಹಿಂದುತ್ವಕ್ಕಾಗಿ ಬದುಕಿದ ಹುಡುಗ, ಹಿಂದೂ ಸಮಾಜದ ಸೇವೆ ಮಾಡಬೇಕು ಎನ್ನುವ ಹುಡುಗರಿಗೆ ಈ ರೀತಿ ಹತ್ಯೆ ಮಾಡುವ ಮೂಲಕ ಭಯ ಬೀಳಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಪ್ರತಿ ಬಾರಿ ಯುವಕರು ಸತ್ತಾಗಲೂ ನಾವು ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎನ್ನುತ್ತೇವೆ. ಆದರೆ ಮತ್ತೆ ಮತ್ತೆ ಇಂತಹ ಕೃತ್ಯಗಳು ನಡೆಯುತ್ತಲೇ ಇವೆ. ಇದಕ್ಕೊಂದು ಶಾಶ್ವತ ಪರಿಹಾರ ಸಿಗಬೇಕಿದೆ ಎಂದು ಹೇಳಿದರು.
ಸರ್ಕಾರ ಇಂತಹ ಭಯೋತ್ಪಾದಕ ಕೃತ್ಯ ಮಾಡುವ ಎಸ್ಡಿಪಿಐ, ಪಿಎಫ್ಐ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳನ್ನು ಬಂದ್ ಮಾಡಬೇಕು. ಮುಂಬರುವ ರಾಜ್ಯ ಬಜೆಟ್ನಲ್ಲಿ ಭಯೋತ್ಪಾದಕ ನಿಗ್ರಹ ದಳಕ್ಕೆ ಸ್ಥಾಪಿಸಬೇಕು ಎಂದು ಸೂರ್ಯ ಆಗ್ರಹಿಸಿದರು.
ಇದನ್ನೂ ಓದಿ: ಮಂತ್ರಾಲಯಕ್ಕೆ ಹೊರಟಿದ್ದ ಬಸ್ನಲ್ಲಿ ಹಠಾತ್ ಕುಸಿದುಬಿದ್ದು ಕೆಎಸ್ಆರ್ಟಿಸಿ ಕಂಡಕ್ಟರ್ ಸಾವು
ನಮ್ಮದು ಕಾಂಗ್ರೆಸ್ನಂತೆ ಹರಾಮ್ ಸರ್ಕಾರವಲ್ಲ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಎಫ್ಐಆರ್ ಅನ್ನೇ ಬದಲಿಸುವ ಪ್ರಯತ್ನಗಳಾಗಿದೆ. ನಮ್ಮ ರಾಜ್ಯದಲ್ಲಿರುವುದು ಹಿಂದುತ್ವದ ಆಧಾರದ ಮೇಲೆ ಇರುವ ಸರ್ಕಾರ, ಹಾಗಾಗಿ ಈ ಪ್ರಕರಣದಲ್ಲಿ ಭಾಗಿಯಾದವರನ್ನು ಹುಡುಕಿ ಗಲ್ಲಿಗೇರಿಸುವ ಕೆಲಸ ಮಾಡಲಾಗುವುದು. ಇದೇ ನಾವು ರಾಜ್ಯದ ಜನರಿಗೆ ಕೊಡುವ ಸಂದೇಶ ಎಂದರು.
ಇದೇ ವೇಳೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಹರ್ಷ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತೇಜಸ್ವಿ ಸೂರ್ಯ ಘೋಷಣೆ ಮಾಡಿದರು.