ನವ ದೆಹಲಿ: ಆಮದು ಅಡಿಕೆಗೆ ಹೆಚ್ಚಿನ ಸುಂಕ ವಿಧಿಸಬೇಕು. ಎಲೆಚುಕ್ಕೆ ರೋಗಕ್ಕೆ ವೈಜ್ಞಾನಿಕ ಔಷಧಿ ಪರಿಚಯಿಸಿ ರೈತರ ಹಿತ ಕಾಪಾಡಬೇಕು ಎಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಇಂದು ಲೋಕಸಭೆ ಕಲಾಪದ ಶೂನ್ಯವೇಳೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು.
ದೇಶದಲ್ಲಿ ಹತ್ತು ರಾಜ್ಯಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಶಿವಮೊಗ್ಗ ಸೇರಿ 16 ಜಿಲ್ಲೆಗಳಲ್ಲಿ ರೈತರು ಅಡಿಕೆ ಬೆಳೆಯುತ್ತಾರೆ. ಕರ್ನಾಟಕದಲ್ಲಿ ಅಂದಾಜು 10 ಲಕ್ಷ ಕುಟುಂಬಗಳು ಅಡಿಕೆ ಕೃಷಿಯನ್ನೇ ಅವಲಂಬಿಸಿವೆ ಎಂದರು.
ಇದನ್ನೂ ಓದಿ: ಅಡಿಕೆ ಎಲೆಚುಕ್ಕಿ ರೋಗ : ತೀರ್ಥಹಳ್ಳಿಗೆ ಕೇಂದ್ರ ವಿಜ್ಞಾನಿಗಳ ತಂಡ ಭೇಟಿ
ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಶೇ.69ರಷ್ಟು ಕರ್ನಾಟಕದಲ್ಲೇ ಉತ್ಪಾದಿಸಲಾಗುತ್ತದೆ. ಒಟ್ಟಾರೆ ದೇಶದಲ್ಲಿ 16.50 ಲಕ್ಷ ಮೆಟ್ರಿಕ್ ಟನ್ ಅಡಿಕೆ ಬೆಳೆಯಲಾಗುತ್ತದೆ. ಅಡಿಕೆಯಿಂದ 24,750 ಕೋಟಿ ರೂಪಾಯಿ ಆದಾಯವೂ ಬರುತ್ತಿದೆ ಎಂದು ಹೇಳಿದರು.
ಆದರೆ, ಈಗ ಅಡಿಕೆ ಬೆಳೆಗಾರರು ಬೆಳೆಗೆ ಎಲೆಚುಕ್ಕೆ ರೋಗದ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆಯ ಉತ್ಪನ್ನವೂ ಶೇ.40ರಿಂದ 50ರಷ್ಟು ಕುಸಿಯುವ ಭೀತಿ ಎದುರಾಗಿದೆ. ಬೆಲೆ ಕುಸಿತದಿಂದಲೂ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಈ ತಿಂಗಳು ಅಡಿಕೆ ಬೆಲೆಯು 58 ಸಾವಿರದಿಂದ 39 ಸಾವಿರ ರೂ.ಗೆ ಕುಸಿದಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಅಡಿಕೆಗೆ ಎಲೆಚುಕ್ಕಿ ಬಾಧೆ ನಷ್ಟ: ಸಾಲಮನ್ನಾ ಮಾಡುವಂತೆ ರೈತರ ಆಗ್ರಹ