ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ ಆಕ್ಸಿಜನ್, ಬೆಡ್, ಯಾವುದೂ ಕೊರತೆ ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಕೋವಿಡ್ ತಡೆ ಹಾಗೂ ಚಿಕಿತ್ಸೆಯ ಕುರಿತು ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 700 ಆಕ್ಸಿಜನ್ ಬೆಡ್ಗಳಿವೆ. ಸದ್ಯಕ್ಕೆ 350 ರಷ್ಟು ಬೆಡ್ ಲಭ್ಯತೆ ಇದೆ. ಅಲ್ಲದೇ ಆಕ್ಸಿಜನ್ ಕೊರತೆ ಸಹ ಇಲ್ಲ. ಆಕ್ಸಿಜನ್ ಕುರಿತು ಸಿಮ್ಸ್ ಜಿಂದಾಲ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದರು.
ಈಗಾಗಲೇ ಕೋವಿಡ್ ಸೋಂಕಿತರ ಸಂಖ್ಯೆ ಸರಾಸರಿ ಶೇ 7.5 ರಷ್ಟು ಇದೆ. ಇದರಿಂದ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ. ಕೋವಿಡ್ ವರದಿಯನ್ನು 24 ಗಂಟೆ ಒಳಗೆ ನೀಡಲು ಸೂಚನೆ ನೀಡಿರುವುದಾಗಿ ತಿಳಿಸಿದರು.
ಮೆಗ್ಗಾನ್ ಅಸ್ಪತ್ರೆಯು ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಲ್ಯಾಬ್ನವರ ಜೊತೆ ಒಪ್ಪಂದ ಮಾಡಿಕೊಂಡು ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ. ಯಾರಿಗೆ ಚಿಕಿತ್ಸೆಯ ಅವಶ್ಯಕತೆ ಇದೆಯೋ ಅವರು ಮಾತ್ರ ಆಸ್ಪತ್ರೆಗೆ ಬನ್ನಿ. ಸಮೂಹದಂತೆ ಬಂದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಯಾರು ಮನೆಯಲ್ಲಿ ಚಿಕಿತ್ಸೆ ಪಡೆಯಬಹುದೋ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಿ ಎಂದು ವಿನಂತಿ ಮಾಡಿಕೊಂಡರು. ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ. ಡಿಸಿ ಕೆ.ಬಿ.ಶಿವಕುಮಾರ್, ಡಿಹೆಚ್ಓ ಡಾ.ರಾಜೇಶ್ ಸೂರಗಿಹಳ್ಳಿ ಸೇರಿದಂತೆ ಸಿಮ್ಸ್ ನಿರ್ದೇಶಕರು ಹಾಜರಿದ್ದರು.