ಶಿವಮೊಗ್ಗ : ನಿನ್ನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಮೋದಿ ಅವರನ್ನು ತೀವ್ರವಾಗಿ ಟೀಕೆ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ, ವಿರೋಧ ಪಕ್ಷದವರು ಇಟಲಿ ಗ್ಲಾಸ್ ಹಾಕಿಕೊಂಡು ನೋಡುವುದನ್ನು ಬಿಡಬೇಕೆಂದು ಹೇಳಿದರು.
ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ವಿರೋಧ ಪಕ್ಷಗಳಿಗೆ ಪ್ರಚಾರಕ್ಕೆ ಯಾವುದೇ ವಿಷಯವಿಲ್ಲ. ಹೀಗಾಗಿ ಅಪಪ್ರಚಾರ ಮಾಡುವುದೇ ಅವರ ಉದ್ದೇಶವಾಗಿದೆ. ಪ್ರಧಾನಿ ನೇತೃತ್ವದಲ್ಲಿ ಅಭಿವೃದ್ಧಿ ನೋಡಲು ಅವರಿಗೆ ಆಗುತ್ತಿಲ್ಲ. ವಿಪಕ್ಷದವರು ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ, ಒಳ್ಳೆಯ ಕೆಲಸ ಮಾಡುವವರನ್ನು ಟೀಕೆ ಮಾಡುವುದನ್ನು ನಿಲ್ಲಿಸಲಿ. ಈ ರೀತಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ವಿಪಕ್ಷದ ನಾಯಕನ ಸ್ಥಾನ ಕಳೆದುಕೊಳ್ಳುವ ಸಂದರ್ಭವೂ ಎದುರಾಗಬಹುದು ಎಂದು ಮಾಜಿ ಸಿಎಂ ಹಾಗು ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಶಿವಮೊಗ್ಗ ಜಿಲ್ಲೆಯ 7 ಹಾಗೂ ಬೈಂದೂರು ಕ್ಷೇತ್ರವನ್ನು ಒಳಗೊಂಡಂತೆ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಶಿಕಾರಿಪುರದಿಂದ ಬಿ.ವೈ ವಿಜಯೇಂದ್ರ ಸ್ಪರ್ಧೆ ಮಾಡಬೇಕು ಎನ್ನುವುದು ಮತದಾರರ ಇಚ್ಛೆ. ಮುಂದಿನ 24 ಗಂಟೆಯಲ್ಲಿ ಪಕ್ಷದ ಅಭ್ಯರ್ಥಿಗಳ ಘೋಷಣೆ ಆಗುತ್ತದೆ ಎಂದರು.
ಇದನ್ನೂ ಓದಿ: ನಿಮ್ಮದೇ ಸರ್ಕಾರ ಇದ್ರೂ ಯಾಕೆ ಭೂಮಿ ಉಳಿಸಲಿಲ್ಲ: ಪ್ರಚಾರಕ್ಕೆ ಬಂದ ಕುಮಾರ್ ಬಂಗಾರಪ್ಪಗೆ ಗ್ರಾಮಸ್ಥರ ಪ್ರಶ್ನೆ