ಶಿವಮೊಗ್ಗ: ರಾಜ್ಯದಲ್ಲಿ ಜಾರಿಗೆ ಬರಲಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ರೈತರು ಭಯಪಡುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಯ ನೀಡಿದ್ದಾರೆ.
ಸೊರಬ ಪಟ್ಟಣದಲ್ಲಿ ಮಾತನಾಡಿದ ಅವರು, ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸಹ ತೀರ್ಮಾನಿಸಲಾಗಿದೆ. ಸರ್ಕಾರ ಎಲ್ಲ ಬಗೆಯ ಸಾಧಕ-ಬಾಧಕಗಳ ಚಿಂತನೆ ನಡೆಸಿ, ರೈತರ ಹಿತರಕ್ಷಣೆ ಮುಂದಿಟ್ಟುಕೊಂಡು ಕಾಯ್ದೆಯನ್ನು ಜಾರಿಗೆ ತರುತ್ತಿದೆ ಎಂದರು.
ನಂತರ ಮಾತನಾಡಿದ ಅವರು, ಸ್ವಾಭಿಮಾನಿ ರೈತರ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ರೈತರ ಅನುಕೂಲಕ್ಕಾಗಿಯೇ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗುತ್ತಿದೆ. ಅನಗತ್ಯ ಗೊಂದಲ ಬೇಡ. ರೈತರ ಭೂಮಿಯನ್ನು ದರ್ಪದಿಂದ ಪಡೆಯುವ ಹಕ್ಕು ಯಾರಿಗೂ ಇಲ್ಲ ಎಂಬುದು ಕಾಯ್ದೆಯಲ್ಲಿರಲಿದೆ ಎಂದು ವಿವರಿಸಿದರು.
ಜಿಲ್ಲೆಯ ಎಂಪಿಎಂ ಕಾರ್ಖಾನೆಯ ಉಳಿವಿಗೆ ನಿರಂತರ ಹೋರಾಟ ನಡೆಯುತ್ತಿದ್ದು, ಕಾರ್ಖಾನೆಯ ಪುನಶ್ಚೇತನಕ್ಕೆ ಈಗಾಗಲೇ ಚರ್ಚೆ ನಡೆಸಲಾಗಿದ್ದು, ಸದ್ಯದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಶಾಸಕ ಕುಮಾರ್ ಬಂಗಾರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಸೇರಿದಂತೆ ಇತರರು ಹಾಜರಿದ್ದರು.